ಪ್ರಿಯಕರನ ಹತ್ಯೆ ಪ್ರಕರಣದ ಡೇಂಜರಸ್ ಗ್ರೀಷ್ಮಾ ಕಾಟಕ್ಕೆ ತತ್ತರಿಸಿದ ಸಹಕೈದಿಗಳು

ತಿರುವನಂತಪುರಂ: ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಪ್ರೇಯಸಿಯೇ ವಿಷ ಉಣಿಸಿ ಶರೋನ್ ರಾಜ್​ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಗ್ರೀಷ್ಮಾಳನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸಲಾಗಿದೆ. ಸಹ ಕೈದಿಗಳು ನೀಡಿದ ದೂರಿನನ್ವಯ ಆಕೆಯನ್ನು ಸ್ಥಳಾಂತರಿಸಲಾಗಿದೆ.

ಆರೋಪಿ ಗ್ರೀಷ್ಮಾ, ಬಂಧನವಾದ ಬಳಿಕ ಅಟ್ಟಕುಲಂಗರಾ ಮಹಿಳಾ ಜೈಲಿನಲ್ಲಿದ್ದಳು. ಇದೀಗ ಆಕೆಯನ್ನು ಮಾವೆಲಿಕ್ಕರ ವಿಶೇಷ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಗ್ರೀಷ್ಮಾಳೊಂದಿಗೆ ಇತರ ಇಬ್ಬರು ಕೈದಿಗಳನ್ನೂ ಕೂಡ ಸ್ಥಳಾಂತರ ಮಾಡಲಾಗಿದೆ. ಜೈಲಿನಲ್ಲಿ ಗ್ರೀಷ್ಮಾಳ ಕಾಟವನ್ನು ಸಹಿಸಲಾರದೇ ಸಹಕೈದಿಗಳು ದೂರು ನೀಡಿದ್ದರು. ಬಂಧನದ ಆರಂಭದಲ್ಲೇ ಪೊಲೀಸ್​ ಠಾಣೆಯಲ್ಲೇ ವಿಷ ಕುಡಿದು ಆಕೆ ಭಾರೀ ಹೈಡ್ರಾಮ ಸೃಷ್ಟಿಸಿದ್ದಳು. ಇನ್ನು ಈಕೆಯನ್ನು ಜಾಮೀನಿನ ಬಿಡುಗಡೆ ಮಾಡುವುದು ಬಹಖ ಅಪಾಯಕಾರಿ ಎಂದು ನ್ಯಾಯಾಲಯವೇ ಅಭಿಪ್ರಾಯಪಟ್ಟಿದೆ.

2022ರ ಅ.25ರಂದು ಕೇರಳದ ತಿರುವನಂತಪುರ ಮೂಲದ ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಪೊಲೀಸರಿಗೆ ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆಯ ಬಳಿಕ ಅ.31ರಂದು ಗ್ರೀಷ್ಮಾ ವಿಷವುಣಿಸಿ ತಾನೇ ಶರೋನ್ ರಾಜ್ ನನ್ನು ಹತ್ಯೆ ಮಾಡಿದ್ದಾಗಿ ತಪೊಪ್ಪಿಕೊಂಡಿದ್ದಳು.

ಅ.14 ರಂದು ಶರೋನ್ ರಾಜ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಗ್ರೀಷ್ಮಾ, ಆಯುರ್ವೇದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಆ ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ಆತ ತನ್ನ ಸ್ನೇಹಿತನ ಸಹಕಾರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶರೋನ್ ರಾಜ್ ಅ.25 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಗ್ರೀಷ್ಮಾ ಮತ್ತು ಶರೋನ್ ರಾಜ್ ಸುಮಾರು ಒಂದು ವರ್ಷಗಿಂತಲೂ ಅಧಿಕ ಸಮಯದಿಂದ ಪ್ರೀತಿಸುತ್ತಿದ್ದರು. ಈ ನಡುವೆ 2022ರ ಫೆಬ್ರವರಿಯಲ್ಲಿ ಇಬ್ಬರ ನಡುವೆ ಕೆಲವು ಸಮಸ್ಯೆಗಳು ಮೂಡಿತ್ತು. ಗ್ರೀಷ್ಮಾಗೆ ಬೇರೆಯವರೊಂದಿಗೆ ಮದುವೆ ನಿಗದಿಯಾಯಿತು. ಆದರೂ, ಇಬ್ಬರು ತಮ್ಮ ಸಂಬಂಧವನ್ನು ಮುಂದುವರೆಸಿದ್ದರು. ಇತ್ತೀಚಿಗೆ ಮತ್ತೆ ಇಬ್ಬರ ನಡುವೆ ಮತ್ತೆ ಸಂಬಂಧ ಹಳಸಿತ್ತು. ಅಂತಿಮವಾಗಿ ಶರೋನ್ ರಾಜ್ ನಿಂದ ದೂರಾಗಲು ಗ್ರೀಷ್ಮಾ ಬಯಸಿದಳು. ಅದಕ್ಕಾಗಿ ಆತನಿಗೆ ಲವ್ ಬ್ರೇಕಪ್ ಮಾಡಿಕೊಳ್ಳಲು ಸಾಕಷ್ಟು ಮನವೊಲಿಸಿದ್ದಳು. ಆದರೆ, ಅದಕ್ಕೆ ಆತ ಒಪ್ಪಲೇ ಇಲ್ಲ. ಇದಾದ ಬಳಿಕ ಅವನನ್ನು ಕೊಲ್ಲಲು ನಿರ್ಧರಿಸಿ, ಅಂತಿಮವಾಗಿ ವಿಷವುಣಿಸಿ ಕೊಂದೇ ಬಿಟ್ಟಿದ್ದಳು.

ತನ್ನ ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ರಾಜ್‌ನನ್ನು ಬೆದರಿಸುವ ಪ್ರಯತ್ನ ಮಾಡಿದ್ದಳು. ಆದರೂ ಆತ ಆಕೆಯನ್ನು ಬಿಡಲು ತಯಾರಿರಲಿಲ್ಲ. ತನ್ನೆಲ್ಲ ಪ್ರಯತ್ನಗಳು ವಿಫಲವಾದ್ದರಿಂದ ಅಂತಿಮವಾಗಿ ಕೊಲೆಯನ್ನು ಆಯ್ಕೆ ಮಾಡಿಕೊಂಡಳು. ಇದು ಆತನ ಪ್ರೇಯಸಿಯ ಪೂರ್ವಯೋಜಿತ ಕೊಲೆ ಎಂದು ಆತನ ಕುಟುಂಬದವರು ಆರೋಪಿಸಿ, ಪೊಲೀಸ್ ದೂರು ದಾಖಲಿಸಿದ್ದರು. ಆದರೆ, ಎಲ್ಲವೂ ಗೊತ್ತಿದ್ದರೂ ಶರೋನ್ ರಾಜ್ ಸಾವಿಗೂ ಮುನ್ನ ಯಾರನ್ನೂ ಅನುಮಾನಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ.