ಮದ್ಯಸೇವನೆಗೆ ಹಣ ಕೊಡದ ಪತ್ನಿ: 100 ರೂ.ಗೆ ಹೆತ್ತಮಗುವನ್ನೇ ಕೊಲೆಗೈದ ಕಡುಪಾಪಿ ತಂದೆ


ಬಿಹಾರ: ಮದ್ಯ ಸೇವನೆಗೆ 100 ರೂ. ಕೊಡಲಿಲ್ಲವೆಂದು ಪತ್ನಿಯ ಮೇಲಿನ ಕಡುಪಾಪಿ ತಂದೆಯೋರ್ವನು ಸಿಟ್ಟಿಗೆ ಹೆತ್ತಮಗುವನ್ನೇ ಕೊಲೆಗೈದಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ಕೌಶಲ್ ಕುಮಾರ್ ಮೃತಪಟ್ಟ ಬಾಲಕ. ಕುಂದನ್ ಕುಮಾರ್ ಸಾಹ್ನಿ (29) ಎಂಬಾತ ಮಗುವನ್ನೇ ಕೊಲೆಗೈದ ಆರೋಪಿ. ಮಂಗಳವಾರ ಸಂಜೆ ಕೂಲಿ ಕೆಲಸ ಮಾಡಿ ಮನೆಗೆ ಬಂದಿದ್ದ ಆರೋಪಿ ಮದ್ಯದ ಅಮಲಿನಲ್ಲಿದ್ದರೂ, ಮತ್ತೆ ಮದ್ಯ ಸೇವಿಸಲು ಪತ್ನಿ ಬಳಿ ಹಣ ಕೇಳಿದ್ದಾನೆ. ಈ ವೇಳೆ ಪತ್ನಿ ಹಣ ಕೊಡಲು ನಿರಾಕರಿಸಿದ್ದಾಳೆ. ಆಗ ಆತ ಪತ್ನಿಗೆ ಹಲ್ಲೆಗೆ ಯತ್ನಿಸಿದ್ದು, ಅಷ್ಟರಲ್ಲಿ ಪತ್ನಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ಈ ವೇಳೆ ಕೋಪಗೊಂಡ ಆರೋಪಿ ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಮನೆಯ ಹೊರಗಡೆ ಅಡ್ಡಲಾಗಿ ಬಿದ್ದಿದ್ದ ಕಂಬದ ಮೇಲೆ ಮಗುವನ್ನು ಮಲಗಿಸಿ ಕಠಾರಿಯಿಂದ ಕುತ್ತಿಗೆಯನ್ನು ಕತ್ತರಿಸಿದ್ದಾನೆ. ಮಗುವಿನ ಧ್ವನಿ ಕೇಳಿ ತಾಯಿ ಹಾಗೂ ಸುತ್ತಮುತ್ತಲಿನವರು ಘಟನಾ ಸ್ಥಳಕ್ಕೆ ತಲುಪಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಆದರೆ ಮಗುವಿನ ಗಂಭೀರ ಪರಿಸ್ಥಿತಿಯನ್ನು ಕಂಡ ವೈದ್ಯರು ಉತ್ತಮ ಚಿಕಿತ್ಸೆಗಾಗಿ ಸದರ್ ಆಸ್ಪತ್ರೆ ಸಮಸ್ತಿಪುರಕ್ಕೆ ರವಾನಿಸಿದ್ದಾರೆ. ಮಂಗಳವಾರ ರಾತ್ರಿ 1 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಘಟನೆ ಬಳಿಕ ಪಾನಮತ್ತ ತಂದೆ ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu