15 ದಿನಗಳಲ್ಲಿ ಮದುವೆಯಾಗಬೇಕಿದ್ದ ನವಜೋಡಿ ದುರಂತದಲ್ಲಿ ಮೃತ್ಯು - ಎರಡೂ ಮನೆಯಲ್ಲಿ ಸ್ಮಶಾನ ಮೌನ


ರಾಜಮಂಡ್ರಿ: ನಿಶ್ಚಿತಾರ್ಥಗೊಂಡ ಜೋಡಿಯೊಂದು ಮದುವೆಗೆ ಇನ್ನೇನು 15 ದಿನ ಇರುವಾಗಲೇ ಅಪಘಾತದಲ್ಲಿ  ದುರಂತವಾಗಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.

ಕಾಕಿನಾಡ ಜಿಲ್ಲೆಯ ಜಗ್ಗಂಪೇಟ ಮಂಡಲದ ನಿವಾಸಿ ಮನೆಪಲ್ಲಿ ರಾಜ್‌ಕುಮಾರ್ (25) ಹಾಗೂ ಅದೇ ಜಿಲ್ಲೆಯ ಕಿರ್ಲಂಪುಡಿ ಮಂಡಲದ ನಿವಾಸಿ ಮಲಿರೆಡ್ಡಿ ದುರ್ಗಾಭವಾನಿ (18) ಮೃತಪಟ್ಟ ದುರ್ದೈವಿ ಜೋಡಿ.  

ಇವಬ್ಬರ ವಿವಾಹ ಮೇ 10ಕ್ಕೆ ನಡೆಯಬೇಕಿತ್ತು. ಮಂಗಳವಾರ ಇಬ್ಬರೂ ಪಶ್ಚಿಮ ಗೋದಾವರಿ ಜಿಲ್ಲೆಯ ಗೌರಿಪಟ್ಟಣದ ಮೇರಿ ಮಾತಾ ದೇವಸ್ಥಾನಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆದರೆ ರಾಜಮಂಡ್ರಿಯ ಕೊಟ್ಟೂರು ಬಳಿ ಹಿಂದಿನಿಂದ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ನವಜೋಡಿ ಸ್ಥಳದಲ್ಲೇ ದುರಂತವಾಗಿ ಸಾವಿಗೀಡಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್‌ಕುಮಾರ್ ಇಟ್ಟಿಗೆ ಕೆಲಸ ಮಾಡುತ್ತಿದ್ದು, ತಂದೆಯೊಂದಿಗೆ ವಾಸಿಸುತ್ತಿದ್ದರು. ದುರ್ಗಾಭವಾನಿಯದ್ದೂ  ಬಡ ಕುಟುಂಬವಾಗಿದ್ದು, ತಂದೆ ಕೂಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದಾರೆ. ದುರ್ಗಾಭವಾನಿ ಪಾಲಕರು, ಸಂಬಂಧಿಕರ ಮನೆಗಳಿಗೆ ತೆರಳಿ ಮದುವೆ ಆಮಂತ್ರಣ ಪತ್ರಿಕೆ ವಿತರಿಸುತ್ತಿದ್ದರು. ಈ ಅವಘಡದ ವಿಚಾರ ತಿಳಿಯದ ಕಾರಣ ಮಂಗಳವಾರ ರಾತ್ರಿಯವರೆಗೂ ಆಮಂತ್ರಣ ಪತ್ರಗಳನ್ನು ಹಂಚಿದ್ದಾರೆ. ಬಳಿಕ ಇಬ್ಬರ ಸಾವಿನ ವಿಚಾರವನ್ನು ಕುಟುಂಬಸ್ಥರು ಪಾಲಕರಿಗೆ ಹೇಳಿದಾಗ ಒಂದು ಕ್ಷಣ ಅವರು ನಂಬಲು ಆಗಲಿಲ್ಲ. ಬಳಿಕ ಸತ್ಯ ತಿಳಿದಾಗ ಪಾಲಕರು ಆಘಾತಕ್ಕೀಡಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಎರಡು ಕುಟುಂಬದಲ್ಲಿ ದುಃಖದ ಕಾರ್ಮೋಡ ಆವರಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ವಿವಾಹವಾಗಬೇಕಿದ್ದ ಜೋಡಿಯೊಂದು ಪ್ರಾಣ ಕಳೆದುಕೊಂಡಿದ್ದು, ಸ್ಥಳೀಯರಲ್ಲಿಯೂ ತುಂಬಾ ಬೇಸರ ಮೂಡಿಸಿದೆ. 
BREAKING NEWS
Loading latest news...
Join our WhatsApp Channel Powered By : Online Pudu