ಮಂಗಳೂರು: ಪೊಲೀಸ್ ಎಂದು ಬೆದರಿಸಿ ಮಹಿಳೆಯ ಹಣ ಸುಲಿಗೆ - ಖತರ್ನಾಕ್ ಖದೀಮ ಅರೆಸ್ಟ್


ಮಂಗಳೂರು: ಮಸಾಜ್ ಪಾರ್ಲರ್ ನಡೆಸುತ್ತಿದ್ದ ಮಹಿಳೆಯನ್ನು ತಾನು ಪೊಲೀಸ್ ಎಂದು ಬೆದರಿಸಿ 38 ಸಾವಿರ ರೂ‌. ಹಣ ಸುಲಿಗೆ ಮಾಡಿದ ಆರೋಪದಲ್ಲಿ ಖತರ್ನಾಕ್ ಖದೀಮನನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾವೂರು ಪ್ರದೇಶದ ಈಶ್ವರ ನಗರ ನಿವಾಸಿ ಶಿವರಾಜ್ ದೇವಾಡಿಗ ಬಂಧಿತ ಆರೋಪಿ.

ಮಸಾಜ್ ಪಾರ್ಲರ್ ನಡೆಸುತ್ತಿದ್ದ ಸವಿತಾ (45) ಎಂಬ ಮಹಿಳೆಗೆ ಆರೋಪಿ ಶಿವರಾಜ್ ದೇವಾಡಿಗ ತನ್ನನ್ನು ಪೊಲೀಸ್ ಎಂದು ಪರಿಚಯಿಸಿದ್ದಾನೆ. ಬಳಿಕ ಆಕೆ ಮಸಾಜ್ ಪಾರ್ಲರ್ ನಡೆಸುವುದಕ್ಕೆ ಹಾಗೂ ಗಳಿಕೆಗಿಂತ ಅಧಿಕ ನಗ-ನಗದು ಹೊಂದಿರುವ ಬಗ್ಗೆ ತಮ್ಮ ವಿರುದ್ಧ ದೂರು ಬಂದಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಹಣ ಕೊಡಬೇಕು ಇಲ್ಲದಿದ್ದರೆ ಪೊಲೀಸ್ ದಾಳಿ ಮಾಡುವುದಾಗಿ ಬೆದರಿಸಿದ್ದಾನೆ. ಆದ್ದರಿಂದ ಮಹಿಳೆ ಆತನಿಗೆ 38,000 ಹಣ ನೀಡಿದ್ದಾರೆ. 

ಆ ಬಳಿಕ ಆಕೆ ಬೆದರಿಕೆ ಹಾಕಿ ಮೋಸ ಮಾಡಿರುವ ಬಗ್ಗೆ ಶಿವರಾಜ್ ದೇವಾಡಿಗನ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು‌. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu