ಉಳ್ಳಾಲ: ಸಂಶಯಗೊಂಡು ಪತ್ನಿಯನ್ನು ಕತ್ತು ಹಿಸುಕಿ ಬಲಿ ಪಡೆದ ಪತಿಯೂ ಆತ್ಮಹತ್ಯೆ

ಉಳ್ಳಾಲ:  ಇಲ್ಲಿನ ಪಿಲಾರು ಪಂಜಂದಾಯನ ದೈವಸ್ಥಾನದ ಬಳಿಯ ಮನೆಯಲ್ಲಿ ಮಹಿಳೆಯೋರ್ವರ ಮೃತದೇಹ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಪತಿಯ ಮೃತದೇಹ ಸಮೀಪದ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ , ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರಬೇಕು ಎಂದು ಪೊಲೀಸರು ಅಂದಾಜಿಸಿದ್ದಾರೆ. 

ಪಿಲಾರು ನಿವಾಸಿ ಶೋಭಾ ಪೂಜಾರಿ ( 45 ) ಹತ್ಯೆಯಾದ ಮಹಿಳೆ ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ ( 55 ) ಆತ್ಮಹತ್ಯೆ ಮಾಡಿಕೊಂಡವರು.

ಗುರುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಶೋಭಾ ಪೂಜಾರಿ ತಮ್ಮ ಮನೆಯ ಬಳಿಯ ಮನೆಯೊಂದರಿಂದ ಗೊಬ್ಬರ ತಂದಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶೋಭಾ ಅವರ ಪುತ್ರ ಕಾರ್ತಿಕ್ ತಾಯಿಗೆ ಕರೆ ಮಾಡಿದ್ದಾನೆ‌. ಆದರೆ ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ವಿಚಾರಿಸಲು ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಶೋಭಾರ ಮನೆಗೆ ಬಂದ ವೇಳೆ ಬೆಡ್ ರೂಮಿನ ಮಂಚದಲ್ಲಿ ಆಕೆಯ ಹತ್ಯೆಯಾಗಿತ್ತು. ಅಲ್ಲದೆ ಪಕ್ಕದ ತೋಟದಲ್ಲಿ ಅವರ ಪತಿ ಶಿವಾನಂದ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪೈಂಟರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ ಶಿವಾನಂದ ಪೂಜಾರಿ, ಪತ್ನಿಯೊಂದಿಗೆ ವಿನಾ ಕಾರಣ ಗಲಾಟೆ ಮಾಡುತ್ತಿದ್ದರು. ಆತನಿಗೆ ಪತ್ನಿ ಬೇರೆಯವರೊಂದಿಗೆ ಮಾತನಾಡಿದರೆ ಅನುಮಾನ ಪಡುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆತ ತನ್ನ ಪತ್ನಿಯನ್ನು ಕೊಂದು , ತಾನೂ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ . 

ಈ ಬಗ್ಗೆ ಅವರ ಪುತ್ರ ಕಾರ್ತಿಕ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu