ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಬಿದ್ದು ಯುವ ಪತ್ರಕರ್ತ ಮೃತ್ಯು

ಚೆನ್ನೈ: ಮಳೆ ನೀರು ಹರಿದು ಹೋಗಲು ತೋಡಿರುವ ಚರಂಡಿಗೆ ಬಿದ್ದು, ಯುವ ಪತ್ರಕರ್ತರೊಬ್ಬರು ಮೃತಪಟ್ಟ ಘಟನೆ ಚೆನ್ನೈನಲ್ಲಿ‌ ನಡೆದಿದೆ. 

ಪುತಿಯಾ ತಲೈಮುರೈ ಎಂಬ ತಮಿಳು ಸುದ್ದಿವಾಹಿನಿಯ ಡಿಜಿಟಲ್ ವಿಭಾಗದ ವಿಷಯ ಸಂಪಾದಕ ಎಸ್.ಮುತ್ತುಕೃಷ್ಣನ್(25) ಮೃತಪಟ್ಟ ಯುವಕ. 

ಶನಿವಾರ ರಾತ್ರಿ ಕೆಲಸ ಮುಗಿಸಿ ಮುತ್ತುಕೃಷ್ಣನ್ ಮನೆಗೆ ಹಿಂದಿರುಗುತ್ತಿದ್ದರು. ಅಶೋಕನಗರದ ಸಿನಿಮಾ ಟಾಕೀಸ್ ಬಳಿ ಮಳೆ ನೀರಿನ ಚರಂಡಿ ಕಾಮಗಾರಿಗೆಂದು ಗುಂಡಿ ತೋಡಲಾಗಿತ್ತು. ಅದನ್ನು ಹಾರಲು ಪ್ರಯತ್ನಿಸಿದಾಗ ಜಾರಿ ಬಿದ್ದು ಈ ದುರಂತ ಸಂಭವಿಸಿದೆ. ಆದರೂ ಅವರು ಹೊಂಡದಿಂದ ಮೇಲಕ್ಕೆ ಬಂದು ಮನೆಗೆ ತೆರಳಿದ್ದು, ಸ್ನೇಹಿತರಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಬಳಿಕ ಮುತ್ತುಕೃಷ್ಣನ್ ಅಸ್ವಸ್ಥಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ನೇಹಿತರು ತಕ್ಷಣ ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ದಿದ್ದಾರೆ. 

ಆದರೆ ವೈದ್ಯರು ಸ್ಕ್ಯಾನಿಂಗ್ ಸೌಲಭ್ಯ ಇರುವ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೋಯಪೆಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಸಂಜೆ ಮುತ್ತುಕೃಷ್ಣನ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

'ಹೊರನೋಟಕ್ಕೆ ಯಾವುದೇ ರಕ್ತಸ್ರಾವ ಕಂಡುಬಂದಿಲ್ಲ . ಆದ್ದರಿಂದ ಗಾಯಗಳಾಗಿರುವುದು ಅವರ ಗಮನಕ್ಕೆ ಬಂದಿಲ್ಲ . ಆದರೆ ಅವರ ದೇಹಸ್ಥಿತಿ ಕ್ಷೀಣಿಸುತ್ತಲೇ ಹೋಯಿತು " ಎಂದು ವೈದ್ಯರು ಹೇಳಿದ್ದಾರೆ . ಈ ಬಗ್ಗೆ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಯುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu