ಬಾಲ್ಯವಿವಾಹವಾದ ಬಾಲಕಿಯ ತಾಳಿ, ಕಾಲುಂಗುರ ಬಿಚ್ಚಿಸಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಕಳುಹಿಸಿದರು!

ಮಂಡ್ಯ: ಬಾಲ್ಯ ವಿವಾಹವಾದ ಬಾಲಕಿಯ ತಾಳಿ ಬಿಚ್ಚಿಸಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಕಳುಹಿಸಿರುವ ಘಟನೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಮಾರ್ಚ್ 27 ರಂದು ಈ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಗೆ ಕೆ.ಆರ್.ಪೇಟೆ ತಾಲೂಕಿನ ಸಂಬಂಧಿ ಯುವಕನೊಂದಿಗೆ ಮನೆಯಲ್ಲೇ ಗುಟ್ಟಾಗಿ ಮದುವೆ ನಡೆದಿತ್ತು. ಆದರೆ ಮಾ.28ರಂದು ತಾಳಿ, ಕಾಲುಂಗುರವನ್ನು ತೆಗೆದು ಪಾಲಕರು ಪರೀಕ್ಷೆ ಬರೆಯಲು ಆಕೆಯನ್ನು ಕಳುಹಿಸಿದ್ದಾರೆ. ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿ ಸ್ನೇಹಿತೆಯ ಬಳಿ ಮದುವೆ ಬಗ್ಗೆ ಹೇಳಿಕೊಂಡಿದ್ದಳು. ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. 

ಸದ್ಯ ಬಾಲಕಿ ಮಂಡ್ಯದ ಬಾಲ ಮಂದಿರದಲ್ಲಿದ್ದಾಳೆ. ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಲಾಗಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಂಡ್ಯ ಪೊಲೀಸರಿಗೆ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಮದುವೆ ನಿಶ್ಚಯವಾಗಿದ್ದಾಗಲೇ ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೆಂದು ಹೇಳಲಾಗಿದೆ. 

ಬಾಲ್ಯ ವಿವಾಹ ಆಗುತ್ತಿರುವ ಬಗ್ಗೆ ದೂರು ಬಂದಾಗಲೇ ಬಾಲಕಿಯ ಮನೆಗೆ ಭೇಟಿ ನೀಡಿ ಅಧಿಕಾರಿಗಳು ವಾರ್ನಿಂಗ್ ನೀಡಿದ್ದರು. ಆದರೆ, ಅಧಿಕಾರಿಗಳ ಎಚ್ಚರಿಕೆ ಹಾಗೂ ಬುದ್ಧಿ ಮಾತಿಗೂ ಕೇರ್ ಮಾಡದೇ ಮಾ.27ರಂದು ಕದ್ದುಮುಚ್ಚಿ ಬಾಲಕಿಯ ವಿವಾಹ ಮಾಡಲಾಗಿದೆ. 
BREAKING NEWS
Loading latest news...
Join our WhatsApp Channel Powered By : Online Pudu