ತಾಯಿಯ ಅನಾರೋಗ್ಯದ ಸ್ಥಿತಿಯನ್ನು ನೋಡಿ ಮನನೊಂದು ಪುತ್ರಿ ಆತ್ಮಹತ್ಯೆ!

ಹೈದರಾಬಾದ್​: ತಾಯಿ ಅನಾರೋಗ್ಯ ಪೀಡಿತೆಯಾಗಿ ನರಳುವುದನ್ನು ಕಂಡು ಸಹಿಸಲಾಗದೆ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಅಲ್ವಾಲ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. 

ಅಲ್ವಾಲದ ಭೂದೇವಿ ನಗರದ ನಿವಾಸಿ ಲತಾ ತಮ್ಮ ಪುತ್ರಿ ರೇವತಿ (28)ಯನ್ನು ಮಲ್ಕಜ್​ಗಿರಿ ಮೂಲದ ಕಿರಣ್​ ಎಂಬವರೊಂದಿಗೆ ಕಳೆದ ವರ್ಷ ಅಕ್ಟೋಬರ್​ನಲ್ಲಿ ಮದುವೆ ಮಾಡಿಕೊಟ್ಟಿದ್ದರು. ಇತ್ತ ಲತಾ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಇದೇ ತಿಂಗಳ 16ರಂದು ರೇವತಿ ತವರಿಗೆ ಬಂದಿದ್ದರು. ಈ ವೇಳೆ ತಾಯಿಯು‌ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಕಂಡು ರೇವತಿ, ತಕ್ಷಣ ಅಳುತ್ತಾ ಕೊಠಡಿ ಒಳಗೆ ಓಡಿ ಹೋಗಿ ಬಾಗಿಲು ಹಾಕಿದ್ದಾರೆ. 

ಸುಮಾರು ಹೊತ್ತಾದರೂ ರೇವತಿ‌ ಬಾಗಿಲು ತೆರೆದು ಮರಳಿ ಬಾರದಿರುವುನ್ನು ನೋಡಿ ಕುಟುಂಬಸ್ಥರು ಬಾಗಿಲು ಮುರಿದು ನೋಡಿದಾಗ ಆಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರ ಹೇಳಿಕೆ ಪಡೆದಿದ್ದು ತನಿಖೆ ಆರಂಭಿಸಿದ್ದಾರೆ. ಮದುವೆಯಾದ ಆರೇ ತಿಂಗಳಲ್ಲಿ ರೇವತಿ ದುರಂತ ಸಾವಿಗೀಡಾಗಿದ್ದು, ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 
BREAKING NEWS
Loading latest news...
Join our WhatsApp Channel Powered By : Online Pudu