ಫೆ.16ರಿಂದ ಪಿಯು, ಪದವಿ ಕಾಲೇಜುಗಳ ಆರಂಭಕ್ಕೆ ಸರಕಾರ ನಿರ್ಧಾರ

ಬೆಂಗಳೂರು: ಸಿಎಂ‌ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ಬುಧವಾರದಿಂದಲೇ(ಫೆ.16) ಪಿಯು ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಫೆ.17ರವರೆಗೆ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ಫೆ.16ರಂದು ಮತ್ತೆ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಹಿಜಾಬ್ ವಿವಾದದ ಸಂಘರ್ಷದ ಸ್ಥಿತಿಗತಿ ಹಾಗೂ ಕಾನೂನು ಸುವ್ಯವಸ್ಥೆಯ ಕುರಿತು ಸಭೆ ನಡೆಸಲಾಯಿತು. ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ‌.ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿ ಐಜಿಪಿ ಪ್ರವೀಣ್ ಸೂದ್ ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.


ಸಭೆ ಬಳಿಕ ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿಎಂ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾಜ್ಯದ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆದಿದೆ. ಬುಧವಾರದಿಂದ ಪಿಯುಸಿ ಹಾಗೂ ಡಿಗ್ರಿ ಕಾಲೇಜುಗಳು ಆರಂಭವಾಗಲಿದೆ. ಕೋರ್ಟ್ ನ ಸೂಚನೆಯನ್ನು ಕಡ್ಡಾಯವಾಗಿ ಎಲ್ಲರೂ ಅನುಸರಿಸಬೇಕು. ಪೊಲೀಸ್ ಇಲಾಖೆ ಇದಕ್ಕೆ ಬೇಕಾದ ಬಂದೋಬಸ್ತ್ ಕೈಗೊಳ್ಳಲಿದೆ ಎಂದು ತಿಳಿಸಿದರು.
BREAKING NEWS
Loading latest news...
Join our WhatsApp Channel Powered By : Online Pudu