ಅಕಾಲ ಮುಪ್ಪಾಗುವ ಸಿಂಡ್ರೋಮ್ ನಿಂದ ಬಳಲುತ್ತಿದ್ದ 15 ವರ್ಷದ ಯೂಟ್ಯೂಬರ್ ಬಾಲಕಿ ಇನ್ನಿಲ್ಲ

ನ್ಯೂಯಾರ್ಕ್:‌ ಅಕಾಲ ಮುಪ್ಪಾಗುವ ಬೆಂಜಮಿನ್‌ ಬಟನ್‌ ಕಾಯಿಲೆ ಎಂದು ಕರೆಯಲ್ಪಡುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಯೂಟ್ಯೂಬರ್‌ ಅಡಾಲಿಯಾ ರೋಸ್‌ ವಿಲಿಯಮ್ಸ್‌ ತಮ್ಮ 15ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಡಾಲಿಯಾ ರೋಸ್‌ ವಿಲಿಯಮ್ಸ್‌ ಮೂರು ತಿಂಗಳ ಮಗುವಾಗಿದ್ದಾಗಲೇ ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್ ಎಂಬ ರೋಗ ಪೀಡಿತರಾಗಿದ್ದರು. 'ಜನವರಿ 12ರಂದು ಸಂಜೆ 7 ಗಂಟೆಗೆ ವಿಲಿಯಮ್ಸ್‌ ಈ ವಿಶ್ವದಿಂದ ಮುಕ್ತಳಾಗಿದ್ದಾಳೆ' ಎಂದು ಅವರ ಅಧಿಕೃತ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಘೋಷಣೆ ಮಾಡಲಾಗಿದೆ. 

ಈ ಪೋಸ್ಟ್ ಗೆ 8 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆ ಬಂದಿದ್ದು, 1.50 ಲಕ್ಷಕ್ಕೂ ಹೆಚ್ಚು ಕಮೆಂಟ್‌ ಗಳು ಬಂದಿವೆ.  'ಆಕೆ ಸದ್ದಿಲ್ಲದೇ ಬಂದಳು ಹಾಗೆಯೇ ಸದ್ದಿಲ್ಲದೇ ತೆರಳಿದ್ದಾಳೆ. ಆದರೆ ಅವಳ ಜೀವನ ಇನ್ನೂ ಬಹಳ ದೂರವಿತ್ತು. ಇಷ್ಟು ಸಣ್ಣ ವಯಸ್ಸಿಗೆ ಅವಳಿಗೆ ಲಕ್ಷಾಂತರ ಮಂದಿಯನ್ನು ಮುಟ್ಟಲು ಸಾಧ್ಯವಾಯಿತು. ಅವಳನ್ನು ಅರಿತಿರುವ ಪ್ರತಿಯೊಬ್ಬರಲ್ಲೂ ಆಕೆ ಮುದ್ರೆಯೊಂದನ್ನು ಒತ್ತಿದ್ದಾಳೆ. ಅವಳು ಇನ್ನು ಮುಂದೆ ನೋವಿನಿಂದ ಬಳಲುವುದಿಲ್ಲ ಮತ್ತು ಈಗ ಅವಳು ಇಷ್ಟಪಡುವ ಎಲ್ಲಾ ಸಂಗೀತಗಳಿಗೂ ಆಕೆ ನೃತ್ಯ ಮಾಡುತ್ತಿದ್ದಾಳೆ' ಎಂದು ಆಕೆಯ ಕುಟುಂಬ ಪೋಸ್ಟ್‌ ನಲ್ಲಿ ತಿಳಿಸಿದೆ. ಅಕಾಲಿಕ ವಯೋಸಹಜತೆಯೊಂದಿಗೆ, ಇತರ ರೋಗಲಕ್ಷಣಗಳಾದ ಕುಬ್ಜತೆ, ದೇಹದಲ್ಲಿನ ಕೊಬ್ಬಿನ ಕೊರತೆ ಮತ್ತು ಸ್ನಾಯು, ಕೀಲುಗಳ ಬಿಗಿತದಿಂದಲೂ ಅಡಾಲಿಯಾ ರೋಸ್‌ ವಿಲಿಯಮ್ಸ್‌ ಬಳಲುತ್ತಿದ್ದಳು.