-->

ಮೂರು ತಿಂಗಳ ಹಿಂದೆ ಮಡಿದಾತ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷ: ಹಾಗಾದರೆ ಶವಸಂಸ್ಕಾರ ನೆರವೇರಿಸಿರುವ ಮೃತದೇಹ ಯಾರದ್ದು?

ಮೂರು ತಿಂಗಳ ಹಿಂದೆ ಮಡಿದಾತ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷ: ಹಾಗಾದರೆ ಶವಸಂಸ್ಕಾರ ನೆರವೇರಿಸಿರುವ ಮೃತದೇಹ ಯಾರದ್ದು?

ಮಧುಗಿರಿ: ಮೂರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ವ್ಯಕ್ತಿಯು ದಿಢೀರೆಂದು ಪ್ರತ್ಯಕ್ಷವಾಗಿ ಕುಟುಂಬಸ್ಥರೂ, ಗ್ರಾಮಸ್ಥರೂ ಬೆಚ್ಚಿ ಬೀಳುವಂತೆ ಮಾಡಿದ್ದಾನೆ.

ಆತ ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಶವಸಂಸ್ಕಾರ, ತಿಥಿಕಾರ್ಯ ನೆರವೇರಿಸಿದ್ದರು. ಮನೆಯಲ್ಲಿ ಆತನ ಫೋಟೋಗೆ ಹಾರವನ್ನು ಹಾಕಿ ಪೂಜೆ ಮಾಡುತ್ತಿದ್ದರು. ಆದರೆ ಮಂಗಳವಾರ ಸತ್ತ ವ್ಯಕ್ತಿ ಗ್ರಾಮದಲ್ಲಿ ದಿಢೀರ್​ ಎಂದು ಪ್ರತ್ಯಕ್ಷವಾಗಿದ್ದಾನೆ ಇದು ಕುಟುಂಬಸ್ಥರಿಗೂ, ಗ್ರಾಮಸ್ಥರಿಗೂ ಅಚ್ಚರಿ ಮೂಡಿಸಿದೆ. 

ಇಂಥಹದ್ದೊಂದು ಅಚ್ಚರಿಯ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಕೊಡಿಗೇನಹಳ್ಳಿ ನಾಗರಾಜಪ್ಪ ಎಂಬುವರು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಇದೀಗ ಅವರು ಮಂಗಳವಾರ ಬೆಳಗ್ಗೆ ಗ್ರಾಮಕ್ಕೆ ಬಸ್​ನಲ್ಲಿ ಬಂದಿಳಿದು ಬಂದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಮಧುಗಿರಿ ತಾಲೂಕು ಚಿಕ್ಕಮಾಲೂರು ಗ್ರಾಪಂ ಅಧ್ಯಕ್ಷೆ ಪ್ರೇಮಲತಾರವರ ತಂದೆ ನಾಗರಾಜಪ್ಪಗೆ ಕುಡಿತದ ಚಟವಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಅವರನ್ನು ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಆದರೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ನಾಗರಾಜಪ್ಪನವರು ಮೃತಪಟ್ಟಿದ್ದಾರೆ ಎಂದು ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿದ್ದರು. ಕುಟುಂಬಸ್ಥರು ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು. ಆದರೆ ಇದೀಗ ನಾಗರಾಜಪ್ಪನವರು ಇದ್ದಕ್ಕಿದ್ದಂತೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು, ಕುಟುಂಬಸ್ಥರಲ್ಲಿ ಸಂತಸದ ಜತೆಗೆ ಗೊಂದಲವೂ ಮೂಡಿಸಿದೆ. 

ನಾಗರಾಜಪ್ಪವರ ಮತ್ತೋರ್ವ ಪುತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿಯೇ ನಾಗರಾಜಪ್ಪನವರು ಸಣ್ಣ-ಪುಟ್ಟ ಕೆಲಸ ನಿರ್ವಹಿಸಿಕೊಂಡಿದ್ದರು. ಆಗಾಗ ಇವರು ಮನೆ ಬಿಟ್ಟು ಹೋಗುತ್ತಿರುವುದು ಸಾನಾನ್ಯವಾಗಿತ್ತು. ಮೂರು ತಿಂಗಳ ಹಿಂದೆ ಮಗಳು ಕೆಲಸ ನಿರ್ವಹಿಸುವ ಅದೇ ಆಸ್ಪತ್ರೆಯ ಶವಾಗಾರದಲ್ಲಿ ಇವರ ತಂದೆಯನ್ನೇ ಹೋಲುವ ವ್ಯಕ್ತಿಯ ಮೃತದೇಹವಿತ್ತು. ಆಸ್ಪತ್ರೆ ದಾಖಲೆಗಳ ಪ್ರಕಾರ ಇವರ ತಂದೆಗೆ ಏನೇನು ಕಾಯಿಲೆಗಳಿದ್ದವೋ ಅವೆಲ್ಲಾ ಲಕ್ಷಣ ಮೃತ ವ್ಯಕ್ತಿಯಲ್ಲಿ ಇದ್ದವು. ಇವರೂ ತಂದೆಯೆಂದೇ ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. 

“ನಮ್ಮ ತಂದೆ ವಾಪಸ್​ ಬಂದಿರುವುದು ಸಂತಸ ತಂದಿದೆ. ನಾವು ಮತ್ತೆಲ್ಲಿಗೂ ಅವರನ್ನು ಕಳುಹಿಸುವುದಿಲ್ಲ” ಎನ್ನುತ್ತಾರೆ ನಾಗರಜಪ್ಪನವರ ಮಕ್ಕಳು. ಇಷ್ಟು ದಿನ ನಾಗರಾಜಪ್ಪನವರು ನಿರಾಶ್ರಿತರ ಶಿಬಿರದಲ್ಲಿದ್ದು, ಮನೆಯವರ ನೆನಪು ಕಾಡಿ ಊರಿಗೆ ಅವರು ವಾಪಸಾಗಿದ್ದರು ಎನ್ನಲಾಗಿದೆ. ಆತನೇ ಎಲ್ಲರನ್ನೂ ಗುರುತು ಹಿಡಿದು ಮಾತನಾಡಿಸಿದ ಬಳಿಕ ಅಸಲಿ ನಾಗರಾಜಪ್ಪ ಎಂದು ತಿಳಿದುಬಂದಿದೆ. ಹಾಗಾದರೆ ಮೂರು ತಿಂಗಳ ಹಿಂದೆ ನೆರವೇರಿಸಿದ್ದ ಮೃತದೇಹ ಯಾರದು ಎಂಬುದು ಇದೀಗ ಯಕ್ಷಪ್ರಶ್ನೆಯಾಗಿದೆ. 

Ads on article

Advertise in articles 1

advertising articles 2

Advertise under the article