ಸಮಸ್ಯೆಗೆ ತಲೆಬಾಗದೇ ಕಾನೂನಿನ ನೆರವು ಪಡೆಯಿರಿ- ನ್ಯಾ. ಅಬ್ದುಲ್ ನಝೀರ್
ಆಳ್ವಾಸ್‌ನಲ್ಲಿ ಜಿಲ್ಲಾ ಕಾನೂನು ಸೇವಾ ಶಿಬಿರಕ್ಕೆ ಚಾಲನೆ
ಪ್ರಜೆಗಳು ಯಾವುದೇ ಸಮಸ್ಯೆಗೆ ತಲೆಬಾಗದೇ ಕಾನೂನಿನ ನೆರವು ಪಡೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಜಸ್ಟಿಸ್ ಎಸ್. ಅಬ್ದುಲ್ ನಝೀರ್ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದಿರೆ ವಕೀಲರ ಸಂಘ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ಕಾನೂನು ಸೇವಾ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯಗಳು ಇಲ್ಲದಿರುವುದರಿಂದ ಪ್ರಕರಣಗಳು ಬಾಕಿ ಉಳಿದಿದೆ. ಆದರೂ ಯಾವ ನಾಗರಿಕನೂ ಸಮಸ್ಯೆಗೆ ತಲೆಬಾಗದೇ, ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಅಪರಾಧಿಕ ಕೇಸುಗಳು ಕಡಿಮೆ ಇದ್ದಷ್ಟು ನಮ್ಮದು ಆರೋಗ್ಯಕರ ಹಾಗೂ ಸ್ವಸ್ಥ ಸಮಾಜ ಎಂಬ ಸಂದೇಶ ಸಿಗುತ್ತದೆ. ಅದೇ ರೀತಿ ಸಿವಿಲ್ ಪ್ರಕರಣಗಳು ಜಾಸ್ತಿ ಇದ್ದಷ್ಟು, ಕಾನೂನು ನೆರವು ಪಡೆಯಲು ಜನರು ಮುಂದಾಗಿದ್ದಾರೆ ಎಂದು ತಿಳಿಯುತ್ತದೆ ಎಂದರು.
ಯೋಜನೆಗಳ ಪ್ರಯೋಜನವನ್ನು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅದಕ್ಕಾಗಿ ಜನರಲ್ಲಿ ಅರಿವು ಮೂಡಿಸುವುದು ಮುಖ್ಯ. ಸರಿಯಾದ ವ್ಯಕ್ತಿಗೆ ಯೋಜನೆ ತಲುಪಿದಾಗ ಮಾತ್ರ ಇಂತಹ ಅರಿವು ಕಾರ್ಯಕ್ರಮಗಳು ಯಶಸವಿಯಾಗುತ್ತವೆ. ಅರಿವು ಮೂಡಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ, ದ.ಕ ಜಿಲ್ಲಾ ಆಡಳಿತಾತ್ಮಕ ನ್ಯಾ. ಸೋಮಶೇಖರ ಹೇಳಿದರು.
ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ತಂತ್ರಿ, ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.