
'12 ಗಂಟೆಯೊಳಗೆ ನಾಯಿಮರಿ ಪತ್ತೆಯಾಗದಿದ್ದರೆ ಎಸ್ ಪಿಗೆ ದೂರು ನೀಡುವೆಯೆಂದ ವಾರಸುದಾರ: 12 ಗಂಟೆಯೊಳಗೆ ಪ್ರಕರಣ ಭೇದನ
Tuesday, December 7, 2021
ಶಿವಮೊಗ್ಗ: ಕಳವು ಪ್ರಕರಣಗಳು, ಕೆಲವೊಂದು ಕ್ಲಿಷ್ಟಕರವಾದ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಶ್ವಾನದಳದ ಮೊರೆ ಹೋಗುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪೊಲೀಸರಿಗೇ ನಾಯಿಯನ್ನೇ ಹುಡುಕಿಕೊಡುವ ಪರಿಸ್ಥಿತಿ ಮುಂದಾಗಿದ್ದು,.
ಶಿವಮೊಗ್ಗದ ರಾಜೇಂದ್ರನಗರ ನಿವಾಸಿ ಡಾ. ಪರಮೇಶ್ವರ್ ತಮ್ಮ ಬೀಗಲ್ ತಳಿಯ ಶ್ವಾನ ಮರಿಯೊಂದು ಕಳವಾಗಿದೆ ಎಂದು ದೂರು ಸಲ್ಲಿಸಿದ್ದರು. ಅಪರಿಚಿತರು ನಾಯಿಮರಿಯನ್ನು ಕದ್ದೊಯ್ಯುವ ದೃಶ್ಯ ಸಿಸಿಟಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ ದೂರು ನೀಡಿರುವ ಡಾ.ಪರಮೇಶ್ವರ್ ಅವರು ನಾಯಿಯನ್ನು ಹುಡುಕಿಕೊಡದಿದ್ದಲ್ಲಿ ಎಸ್ಪಿಗೆ ದೂರು ನೀಡುವುದಾಗಿಯೂ ಪೊಲೀಸರಿಗೆ ತಿಳಿಸಿದ್ದರು.
ದೂರಿನಲ್ಲಿದ್ದ ಅವರ ಹೇಳಿಕೆಯಿಂದ ಚುರುಕಾದ ಶಿವಮೊಗ್ಗದ ಜಯನಗರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸಿಸಿಟಿವಿ ಫೂಟೇಜ್ ಅನ್ನು ಆಧಾರವಾಗಿರಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ. ಇದೀಗ ದೂರು ನೀಡಿದ 12 ಗಂಟೆಯೊಳಗೇ ನಾಯಿಯನ್ನು ಪತ್ತೆ ಮಾಡಿದ್ದಾರೆ. ಮಾತ್ರವಲ್ಲ, ನಾಯಿಮರಿಯನ್ನು ವಾರಸುದಾರರಿಗೆ ಹಸ್ತಾಂತರ ಕೂಡ ಮಾಡಿದ್ದಾರೆ.