ಪದ್ಮಶ್ರೀ ಪಡೆಯಲು ದೆಹಲಿಗೆ ತೆರಳಿದ ಅಕ್ಷರ ಸಂತ ಹಾಜಬ್ಬ- ವಿಮಾನ ಹತ್ತಲು ಹೋದ ಇವರ ವಿಡಿಯೋ ವೈರಲ್


ಮಂಗಳೂರು; ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ನಾಳೆ ದೆಹಲಿಯಲ್ಲಿ ಪ್ರದಾನವಾಗಲಿದೆ. ಈ ಪ್ರಶಸ್ತಿ ಸ್ವೀಕಾರಕ್ಕೆ ಮಂಗಳೂರಿನಿಂದ ದೆಹಲಿಗೆ ಹೊರಟ ಹರೇಕಳ ಹಾಜಬ್ಬ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.




ಹೌದು, ಬಿಳಿ ಮುಂಡು, ಶರ್ಟ್ ಧರಿಸಿ ಕೈಯಲ್ಲೊಂದು ಬ್ಯಾಗ್ ಹಿಡಿದುಕೊಂಡು ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಕ್ಯೂ ನಲ್ಲಿರುವ ಹರೇಕಳ ಹಾಜಬ್ಬ ಅವರ ವಿಡಿಯೋ ಇಂದು ಹಲವರ ವಾಟ್ಸಪ್ ಸ್ಟೇಟಸ್ ಆಗಿ ಮಾರ್ಪಟ್ಟಿದೆ. ಹಲವರು ಫೇಸ್ ಬುಕ್ , ವಾಟ್ಸಪ್ ನಲ್ಲಿ ಇದನ್ನು ಶೇರ್ ಮಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

2020 ರಲ್ಲಿ  ಹರೇಕಳ ಹಾಜಬ್ಬ ಅವರಿಗೆ ಘೋಷಣೆಯಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಕೊರೊನಾ ಕಾರಣದಿಂದ ಕಳೆದ ವರ್ಷ‌ ಪ್ರದಾನ ಮಾಡಲಾಗಿರಲಿಲ್ಲ. ಈ ಕಾರಣದಿಂದ ನಾಳೆ ( ನವೆಂಬರ್ 8 ) ರಂದು ಪ್ರಶಸ್ತಿ ಪ್ರದಾನ ನಡೆಯಲಿದ್ದು ಕೇಂದ್ರ ಸರಕಾರದ ಆಹ್ವಾನದಂತೆ ಹರೇಕಳ ಹಾಜಬ್ಬ ಅವರು ದೆಹಲಿಗೆ ತೆರಳಿದ್ದಾರೆ.