ವಿಟ್ಲದಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ: ನ್ಯಾಯಾಲಯದಲ್ಲಿ ಆರೋಪ ಸಾಬೀತು

 



 

ಮಂಗಳೂರು:  ಬಂಟ್ವಾಳ ತಾಲೂಕಿನ  ವಿಟ್ಲದ ದರ್ಬೆ ರಸ್ತೆಯಿಂದ ಅಪ್ರಾಪ್ತೆ ಶಾಲಾ  ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯ ಅಪರಾಧ ಸಾಬೀತಾಗಿದ್ದು ಸೆಪ್ಟೆಂಬರ್ 27 ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

 

ಬಂಟ್ವಾಳ ತಾಲೂಕಿನ  ವಿಟ್ಲ ಕಸ್ಬಾ ಉಕ್ಕುಡದ ಬಾಲಕೃಷ್ಣ (25)  ಆರೋಪ ಸಾಬೀತಾಗಿದೆ ಎಂದು  ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 (ಪೊಕ್ಸೊ) ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ತೀರ್ಪನ್ನು ನೀಡಿದ್ದಾರೆ.

ಬಾಲಕೃಷ್ಣ 2019ರ ಜುಲೈ 25ರಂದು ಪರಿಚಿತ ಅಪ್ರಾಪ್ತ  ಬಾಲಕಿಯು ಶಾಲೆಗೆ ನಡೆದುಕೊಂಡು ಹೋಗುವಾಗ ಅಪಹರಿಸಿದ್ದ.  ಗೆಳೆಯ  ಪರಶುರಾಮನ ಬೈಕ್‌ನಲ್ಲಿ ಆತನ ಸಹಕಾರದೊಂದಿಗೆ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ.  ಆಕೆಯನ್ನು ಬಿ.ಸಿ.ರೋಡ್‌ವರೆಗೆ ಬೈಕ್‌ನಲ್ಲಿ ಕರೆದೊಯ್ದು ನಂತರ  ಮೂಡುಬಿದಿರೆ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ  ಬಸ್ ನಲ್ಲಿ ಕರೆದೊಯ್ದಿದ್ದ.  ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಅತ್ಯಾಚಾರ ಎಸಗಿದ ಬಳಿಕ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ.  ಬಾಲಕಿ ಕಾಣೆಯಾದ ಬಗ್ಗೆ ಆಕೆಯ ತಾಯಿ ವಿಟ್ಲ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದು ಇದೇ ಸಂದರ್ಭದಲ್ಲಿ  ಬೆಂಗಳೂರಿನಲ್ಲಿ ಆರೋಪಿ ಮತ್ತು ಬಾಲಕಿಯನ್ನು ಕಂಡ ಪೊಲೀಸರು  ಅವರನ್ನು ವಿಟ್ಲ ಪೊಲಿಸರಿಗೆ ಒಪ್ಪಿಸಿದ್ದರು

ವಿಟ್ಲ ಪೊಲೀಸರು ಅವರಿಬ್ಬರನ್ನು ಕರೆತಂದು ಆತನ ವಿರುದ್ದ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.  ಇದರ ವಾದವಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಯ ಆರೋಪ ಸಾಬೀತಾಗಿದೆ ಎಂದು ತೀರ್ಪು ನಿಡಿದ್ದು ಸೆಪ್ಟೆಂಬರ್ 27 ಕ್ಕೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ