'ಕೋಟಿಗೊಬ್ಬ 3', 'ಸಲಗ' ಸಿನಿಮಾ ರಿಲೀಸ್ ಗೆ ಅ.14 ರಂದು ಡೇಟ್ ಫಿಕ್ಸ್

ಬೆಂಗಳೂರು: 'ಕಿಚ್ಚ' ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’ ಹಾಗೂ 'ದುನಿಯಾ' ವಿಜಯ್​ ನಟನೆಯ ‘ಸಲಗ’ ಸಿನಿಮಾ ಅಕ್ಟೋಬರ್​ 14ರಂದು ಒಂದೇ ದಿನ ರಿಲೀಸ್​ ಆಗಲು ಬಹುತೇಕ ಡೇಟ್ ಫಿಕ್ಸ್ ಆಗಿದೆ. 

ಈ ವಿಚಾರದ ಬಗ್ಗೆ 'ಸಲಗ' ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಮಾತನಾಡಿದ್ದು, ‘ಇದು ಖಂಡಿತಾ ಸ್ಟಾರ್​ವಾರ್ ಅಲ್ಲ. ‘ಕೋಟಿಗೊಬ್ಬ 3’‌ ಸಿನಿಮಾ ನಿರ್ಮಾಪಕ ಸೂರಪ್ಪಬಾಬು ಅವರು ಸಿನಿಮಾ ರಿಲೀಸ್ ಮಾಡಲು ತೆಗೆದುಕೊಂಡ ನಿರ್ಧಾರ ತಡವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾವು ಸಿನಿಮಾ ಬಿಡುಗಡೆ ಮಾಡಲು ಕಾಯುತ್ತಿದ್ದೆವು. 3 ಸಿನಿಮಾಗಳ ನಿರ್ಮಾಪಕರು ಮಾತುಕತೆ ನಡೆಸಿದ್ದೆವು. ಸರಕಾರದ ಅನುಮತಿ ದೊರಕಿದ ಬಳಿಕವೇ ‘ಸಲಗ’ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಚರ್ಚೆಯಾಗಿತ್ತು. ಮೊದಲೇ ಮಾತುಕತೆ ನಡೆಸಿದಂತೆ ಇದೀಗ ನಾವು ‘ಸಲಗ’ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ದಸರಾ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ಸಲಗ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.​


ಅದೇ ರೀತಿ ‘ನಮ್ಮ ಸಿನಿಮಾ ರಿಲೀಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನಟ ಸುದೀಪ್ ಟ್ವೀಟ್​ ಮಾಡಿ ಹಾರೈಸಿದ್ದಾರೆ. ಸುದೀಪ್​ ಈ ಹಿಂದಿನಿಂದಲೂ ‘ಸಲಗ’ ಸಿನಿಮಾ ಜೊತೆಗಿದ್ದಾರೆ. ಕನ್ನಡದ ದೊಡ್ಡ ಬಜೆಟ್ ನ ಎರಡು ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುತ್ತಿರುವುದು ಬಹಳ ಸಂತಸ ತಂದಿದೆ. ಸ್ಯಾಂಡಲ್ ವುಡ್ ನಲ್ಲಿ ನಾವೆಲ್ಲರೂ ಒಂದಾಗಿಯೇ ಇದ್ದೇವೆ. ಇಮದು ಒಂದೊಂದು ಊರಿನಲ್ಲಿ 2ಕ್ಕಿಂತಲೂ ಅಧಿಕ ಥಿಯೇಟರ್ ಗಳಿವೆ. ಆದ್ದರಿಂದ ಎರಡೂ ಸಿನಿಮಾಗಳಿಗೂ ಟಾಕೀಸ್​ ಸಮಸ್ಯೆ ಉದ್ಭವಿಸೋಲ್ಲ’ ಎಂದಿದ್ದಾರೆ.

ಇನ್ನು ನಟ 'ದುನಿಯಾ' ವಿಜಯ್​‌ಮಾತನಾಡಿ, ‘ನಟ ಸುದೀಪ್​ ಹಾಗೂ ನನ್ನ ನಡುವೆ ಧನಾತ್ಮಕ ಸ್ಪರ್ಧೆ ಇದೆ. ಇದನ್ನು ಅಭಿಮಾನಿಗಳು ಯಾವತ್ತೂ ಸ್ಟಾರ್​ ವಾರ್​ ಎಂದು ಭಾವಿಸುವುದು ಬೇಡ.‌ ಕಷ್ಟಪಟ್ಟು ನಾನು ಸಲಗ ಸಿನಿಮಾ ಮಾಡಿದ್ದೇನೆ. ಓರ್ವ ಸಿನಿಮಾ ನಿರ್ಮಾಪಕನನ್ನು ಕಾಪಾಡುವುದು ಎಲ್ಲಾ ಅಭಿಮಾನಿಗಳ ಜವಾಬ್ದಾರಿ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ’ ಎಂದಿದ್ದಾರೆ.