ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪ್ರತಿಪಕ್ಷಗಳ ಮಹಾ ವೇದಿಕೆ ಸಜ್ಜುಗೊಳ್ಳುತ್ತಿದೆ. ಕಾಂಗ್ರೆಸ್ ಕರೆದಿರುವ ಮಹಾ ಸಭೆಯಲ್ಲಿ 19 ಪಕ್ಷಗಳು ಭಾಗವಹಿಸಿದ್ದು, ಸಮಾಜವಾದಿ, ಬಹುಜನ ಸಮಾಜವಾದಿ ಮತ್ತು ಆಮ್ ಆದ್ಮಿ ಮಾತ್ರ ಈ ಸಭೆಯಿಂದ ದೂರ ಉಳಿದಿದೆ.
ಅಚ್ಚರಿಯ ಸಂಗತಿ ಎಂದರೆ, ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಯಾಗಿರುವ ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ಈ ವೇದಿಕೆಯಲ್ಲಿ ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ಎರಡು ಪಕ್ಷಗಳು ಒಟ್ಟಾಗಿ ವೇದಿಕೆ ಹಂಚಿಕೊಂಡಿವೆ.
ತೃಣಮೂಲ್ ಕಾಂಗ್ರೆಸ್, ರಾಷ್ಟ್ರೀಯ ವಾದಿ ಕಾಂಗ್ರೆಸ್ ಪಕ್ಷ, ಡಿಎಂಕೆ, ಶಿವಸೇನಾ, ಜೆಎಂಎಂ, ಸಿಪಿಎಂ, ಸಿಪಿಐ, ನ್ಯಾಷನಲ್ ಕಾಂಗ್ರೆಸ್, ಆರ್‌ಜೆಡಿ, ಜೆಡಿಎಸ್, ಆರ್‌ಎಲ್‌ಡಿ, ಕೇರಳ ಕಾಂಗ್ರೆಸ್ ಸಹಿತ 19 ಪಕ್ಷಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, ಮುಂದಿನ ಮಹಾಸಮರಕ್ಕೆ ಈ ಸಭೆ ಮೈಲುಗಲ್ಲಾಗಿದೆ ಎಂದು ಭಾವಿಸಲಾಗಿದೆ.
ಈ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಕಾಂಗ್ರೆಸ್ ಮಹಾನಾಯಕಿ ಸೋನಿಯಾ ಗಾಂಧಿ, ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಬೇಕಾಗಿದೆ. ಅದರ ಹೊರತು ಅನ್ಯ ದಾರಿ ಇಲ್ಲ ಎಂದು ಹೇಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.



