-->

Foul play in Kit deal- ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ; ಲೋಕಾಯುಕ್ತಕ್ಕೆ ಕಟ್ಟಡ ಕಾರ್ಮಿಕ ಸಂಘ ದೂರು?

Foul play in Kit deal- ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ; ಲೋಕಾಯುಕ್ತಕ್ಕೆ ಕಟ್ಟಡ ಕಾರ್ಮಿಕ ಸಂಘ ದೂರು?




ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಲಸೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಂಚಲು ಕರೆಯಲಾದ ಟೆಂಡರ್ ಪ್ರಕ್ರಿಯೆ, ಆಹಾರ ಕಿಟ್ ಗಳ ಕಳಪೆ ಗುಣಮಟ್ಟ ಮತ್ತು ಖರೀದಿಯಲ್ಲಿ ಅವ್ಯವಹಾರ, ರಾಜಕೀಯ ಮಧ್ಯಪ್ರವೇಶ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಮುಂದಾಗಿದೆ.






ರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸೆಸ್ ಹಣ ಸಂಪೂರ್ಣವಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು. ವಲಸೆ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಆಹಾರ‌ ಕಿಟ್‌ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ತಮ್ಮ ಹಣ ಮತ್ತು ವಿಪತ್ತು ನಿರ್ವಹಣಾ ನಿಧಿಯಿಂದ ಹಂಚಿಕೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.



ಆದರೆ, ಕಲ್ಯಾಣ ಮಂಡಳಿಯ ಹಣದಲ್ಲಿ ಆಹಾರ ಕಿಟ್ ಗಳನ್ನು ಕಾರ್ಮಿಕ ಸಚಿವರು ಖರೀದಿಸಿರುವುದು ಮತ್ತು ಬೆಂಗಳೂರಿನಲ್ಲಿ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಸಂಘಗಳ ಮೂಲಕ ನೆಪ ಮಾತ್ರಕ್ಕೆ ಹಂಚಿಕೆ ಮಾಡಲಾಗಿದೆ. ಇನ್ನುಳಿದ ಕಿಟ್‌ಗಳನ್ನು ರಾಜ್ಯಾದ್ಯಂತ ಮಂಡಳಿಗೆ ಸಂಬಂಧವೇ ಇಲ್ಲದ ಶಾಸಕರಿಗೆ ಹಂಚಿಕೆ ಮಾಡಿರುವುದು 1996 ಕಟ್ಟಡ ಕಾರ್ಮಿಕ ಕಾಯ್ದೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.



ಅಲ್ಲದೆ ಲಕ್ಷಾಂತರ ರೇಷನ್ ಕಿಟ್ ಗಳನ್ನು ಸಗಟು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಬೆಲೆಗೆ ಆರು ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡಿರುವುದರ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಎದ್ದು ಕಾಣುತ್ತಿದೆ. ಇದರಿಂದ ಕಲ್ಯಾಣ ಮಂಡಳಿಗೆ ನೂರಾರು ಕೋಟಿ ರೂ. ನಷ್ಟ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.



ರಾಜ್ಯದ ವಿವಿಧ ಕಾರ್ಮಿಕ ಸಂಘಟನೆಗಳು ಈ ಬಗ್ಗೆ ಮಾಡಿರುವ ಈ ಆರೋಪಗಳಿಗೆ ರಾಜ್ಯದ ಕಾರ್ಮಿಕ ಸಚಿವರು ಸಮರ್ಪಕ ನೀಡಿರುವ ಉತ್ತರ ನೀಡಿಲ್ಲ. ಕೇವಲ ಆಹಾರ ಕಿಟ್‌ಗಳ ಗುಣಮಟ್ಟಕ್ಕೆ ಮಾತ್ರಕ್ಕೆ ತನಿಖೆಯನ್ನು ಸೀಮಿತಗೊಳಿಸಲಾಗಿದೆ. ಉಳಿದಂತೆ ಖರೀದಿ ವ್ಯವಹಾರ, ಶಾಸಕರಿಗೆ ಕಿಟ್ ವಿತರಣೆ, 10 ಕೆ.ಜಿ. ಅಕ್ಕಿ ಬದಲು ಐದು ಕೆ.ಜಿ. ನೀಡಿರುವುದು ಸೇರಿ ಇತರೆ ಆರೋಪಗಳಿಗೆ ಯಾವುದೇ ಸ್ಪಷ್ಟೀಕರಣ ಸಿಕ್ಕಿಲ್ಲ. ಲಕ್ಷಾಂತರ ಕಾರ್ಮಿಕರಿಗೆ ಇನ್ನೂ ಕೋವಿಡ್ ಪರಿಹಾರದ ಹಣ ಜಮೆಯಾಗಿಲ್ಲ ಹೀಗಿದ್ದೂ ಕಲ್ಯಾಣ ಮಂಡಳಿಯ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಜಾಹೀರಾತು ಮತ್ತು ಭಿತ್ತಿ ಹೋರ್ಡಿಂಗ್ ಪ್ರದರ್ಶನಗಳ ಮೂಲಕ ಕಾರ್ಮಿಕರನ್ನು ದಿಕ್ಕುತಪ್ಪಿಸುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.



ಈ ಹಿನ್ನೆಲೆಯಲ್ಲಿ ಆಹಾರ ಕಿಟ್‌ಗಳ ಖರೀದಿಯ ಒಟ್ಟು ವ್ಯವಹಾರವನ್ನೇ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಕಲ್ಯಾಣ ಮಂಡಳಿಯಲ್ಲಿ ರುವ ಸೆಸ್ ಹಣದ ಮೇಲೆ ಶಾಸಕರಿಗೆ, ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅಲ್ಲದೆ ಮಂಡಳಿಯ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕಲ್ಯಾಣ ಮಂಡಳಿಯ ಸಭೆಯನ್ನು ಕರೆಯದೇ ಏಕಪಕ್ಷೀಯವಾಗಿ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.



ಕಾನೂನಿನ ನಿಯಮಗಳ ಪ್ರಕಾರ ಇದಕ್ಕೆ ಅವಕಾಶವಿಲ್ಲ. ಆದರೂ, ಕಳೆದ ಎರಡು ವರ್ಷಗಳಿಂದ ಸಚಿವರು ಎಲ್ಲ ತೀರ್ಮಾನಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡು ನಂತರ ಕೋಟಿಗಟ್ಟಲೆ ರೂಪಾಯಿಗಳ ಖರ್ಚಿಗೆ ಘಟನೋತ್ತರ ಅನುಮೋದನೆ ಪಡೆಯುವ ಪರಿಪಾಠ ಬೆಳೆಸಿದ್ದಾರೆ. ಇದು ಅಕ್ರಮ ಮತ್ತು ಕಾನೂನು ಬಾಹಿರವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಟ್ಟಡ ಕಾರ್ಮಿಕರ ಸಂಘ ಹೇಳಿದೆ.



ಈ ಎಲ್ಲ ವಿಚಾರಗಳನ್ನು ಪರಿಗಣಿಸಿ, ಕಳೆದ ಒಂದು ವರ್ಷದಿಂದ ನಡೆದಿರುವ ಎಲ್ಲ ಪ್ರಕ್ರಿಯೆಗಳ ಕುರಿತ ಲಭ್ಯ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ಮತ್ತು‌ ರಾಜ್ಯ ಕಾನೂನು ಪ್ರಾಧಿಕಾರಕ್ಕೆ ನೀಡಿ, ಅಕ್ರಮ ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಕೋರಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಮುಂದಾಗಿದೆ.

Ads on article

Advertise in articles 1

advertising articles 2

Advertise under the article