-->

Nalin is a failure MP-Muneer | ಕ್ಷಿಪ್ರ ಕಾರ್ಯಪಡೆ ಘಟಕ ಶಿವಮೊಗ್ಗದ ಪಾಲು: ನಳಿನ್ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ ಎಂದ ಮುನೀರ್

Nalin is a failure MP-Muneer | ಕ್ಷಿಪ್ರ ಕಾರ್ಯಪಡೆ ಘಟಕ ಶಿವಮೊಗ್ಗದ ಪಾಲು: ನಳಿನ್ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ ಎಂದ ಮುನೀರ್






ಮಂಗಳೂರಲ್ಲಿ ತಲೆ ಎತ್ತಬೇಕಿದ್ದ ಕ್ಷಿಪ್ರ ಕಾರ್ಯ ಪಡೆ ಘಟಕ ಶಿವಮೊಗ್ಗದ ಪಾಲು

ಸಂಸದ ನಳಿನ್ ಕುಮಾರ್ ಕಟೀಲ್ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಟು ಮಾತಿನಿಂದ ಚುಚ್ಚಿದ ಮುನೀರ್ ಕಾಟಿಪಳ್ಳ


ಮಂಗಳೂರಿನ ಬಡಗ ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ, ಗಲಭೆಗಳನ್ನು ನಿಯಂತ್ರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಕ್ಷಿಪ್ರ ಕಾರ್ಯ ಪಡೆ (ಆರ್ ಎ ಎಫ್) ಘಟಕ ಯಾರ ಅರಿವಿಗೂ ಬಾರದಂತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸ್ಥಳಾಂತರಗೊಂಡಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಿರುವ ಅನ್ಯಾಯ. ಇದು ಸಂಸದ ನಳಿನ್ ಕುಮಾರ್ ಕಟೀಲರ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ, ಸಂಸದರು ಈ ವೈಫಲ್ಯದ ಹೊಣೆ ಹೊತ್ತು ಜಿಲ್ಲೆಯ ಜನತೆಯ ಕ್ಷಮೆ ಕೋರಬೇಕು, ವಿವರಣೆ ನೀಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.





ಕೋಮು ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಷಿಪ್ರ ಕಾರ್ಯ ಪಡೆಯ ಘಟಕ ಸ್ಥಾಪನೆ ಅತೀ ಅಗತ್ಯವಾಗಿತ್ತು.‌ ಸದಾ ಮತೀಯ ವಿದ್ವೇಷ ಹಾಗೂ ಉದ್ವಿಗ್ನತೆಯಿಂದ ನಲುಗುವ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮಂಗಳೂರು ಕೇಂದ್ರ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.



ಕ್ಷಿಪ್ರ ಕಾರ್ಯ ಪಡೆ ಘಟಕ ಮಂಗಳೂರಿನಲ್ಲಿ ಸ್ಥಾಪನೆಗೊಂಡರೆ ಅದು ವಿಮಾನ ನಿಲ್ದಾಣ ಸಹಿತ ಸಾರಿಗೆ ಸಂಪರ್ಕದ ಸೌಲಭ್ಯದಿಂದಾಗಿ ದೂರದ ಜಿಲ್ಲೆಗಳಿಗೂ ತಲುಪಲು ಅನುಕೂಲಕರ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಈ ಘಟಕದ ಉಪಸ್ಥಿತಿಯೇ ಹಲವು ಹಿಂಸಾಚಾರಗಳಿಗೆ ಕಡಿವಾಣ ಹಾಕುವ ನೈತಿಕ ಶಕ್ತಿಯನ್ನು ಒದಗಿಸುತ್ತಿತ್ತು. ಆ ಹಿನ್ನೆಲೆಯಲ್ಲೇ ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದಲ್ಲಿ ಐವತ್ತು ಎಕರೆ ಸ್ಥಳವನ್ನು ಗುರುತಿಸಿ ಕ್ಷಿಪ್ರ ಕಾರ್ಯ ಪಡೆ ಘಟಕಕ್ಕಾಗಿ ಕಾದಿರಿಸಲಾಗಿತ್ತು. ಹೆಚ್ಚುವರಿ ಭೂಮಿ ಅಗತ್ಯ ಬಿದ್ದಲ್ಲಿ ಒದಗಿಸುವ ಸಿದ್ದತೆಗಳನ್ನು ಮಾಡಲಾಗಿತ್ತು ಎಂದು ಮುನೀರ್ ಕಾಟಿಪಳ್ಳ ನೆನಪಿಸಿದರು.



ಆದರೆ, ಯಾವುದೇ ಚರ್ಚೆ ಇಲ್ಲದೆ, ಏಕಾಏಕಿ ಕ್ಷಿಪ್ರ ಕಾರ್ಯ ಪಡೆಯ ಘಟಕವನ್ನು ಯಾವ ರೀತಿಯಿಂದಲೂ ಸೂಕ್ತವಲ್ಲದ ಭದ್ರಾವತಿಗೆ ರಾತ್ರೋರಾತ್ರಿ ಸ್ಥಳಾಂತರಿಸಿ ಶಿಲನ್ಯಾಸ ನೆರವೇರಿಸಲಾಗಿದೆ. ಅದೂ ಜಿಲ್ಲೆಯ ಜನರನ್ನು ಕತ್ತಲಲ್ಲಿಟ್ಟು... ಇದು ಸದಾ ಕೋಮು ಉದ್ವಿಗ್ನತೆಯಿಂದ ನರಳುವ ದಕ್ಷಿಣ ಕನ್ನಡ ಜಿಲ್ಲೆಗೆ ಆಗಿರುವ ಅನ್ಯಾಯ. ಈ ಕತ್ತಲ ಕಾರ್ಯಾಚರಣೆಗೆ ಉದ್ರೇಕಕಾರಿ ಭಾಷಣಗಳಿಗೆ ಕುಖ್ಯಾತಿ ಪಡೆದ ಸಂಸದ, ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರ ಅಸಮರ್ಥತೆಯೇ ಮತ್ತು ವೈಫಲ್ಯವೇ ನೇರ ಕಾರಣ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.



ಜಿಲ್ಲೆಗೆ ಮಾರಕವಾದ ಹಲವು ಮಾಲಿನ್ಯಕಾರಿ ಯೋಜನೆಗಳನ್ನು ಮಂಗಳೂರಿಗೆ ಡಂಪ್ ಮಾಡಲು ಅವಕಾಶ ನೀಡುವ ಮಾನ್ಯ ಸಂಸದರು, ಜನೋಪಯೋಗಿ ಯೋಜನೆಗಳು ಕೈತಪ್ಪುವಾಗ ಯಾವುದೇ ಧ್ವನಿ ಎತ್ತದೆ ಜಿಲ್ಲೆಗೆ ಸತತ ಅನ್ಯಾಯವಾಗಲು ಕಾರಣರಾಗಿದ್ದಾರೆ ಎಂದು ಅವರು ದೂರಿದ್ದಾರೆ.



ಈ ಹಿಂದೆ ಕರಾವಳಿಯ ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ, ಇಲ್ಲಿನ ಅಂತಾರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣ ಮೋದಿ ಆಪ್ತ ಅದಾನಿ ಕಂಪೆನಿಗೆ ಹಸ್ತಾಂತರ, ಇದೀಗ ಕ್ಷಿಪ್ರ ಕಾರ್ಯ ಪಡೆ ಘಟಕ ಸ್ಥಳಾಂತರ ಸಂಸದ ನಳಿನ್ ಅವರ ಅಸಾಮರ್ಥ್ಯ, ವೈಫಲ್ಯಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದೆ. ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ದಯನೀಯ ವೈಫಲ್ಯಗಳಿಗಾಗಿ ಜಿಲ್ಲೆಯ ಜನರಲ್ಲಿ ಕ್ಷಮಾಪಣೆ ಕೋರಬೇಕು ಮತ್ತು ತಮ್ಮ ವೈಫಲ್ಯಕ್ಕೆ ವಿವರಣೆ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article