ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಸಿಎಂ ಧಾಮಿ ಎದುರಲ್ಲೇ ಲಂಚದ ಆರೋಪ ಮಾಡಿದಳೇ ಕ್ರೀಡಾಪಟು?: ವಿಪಕ್ಷ ಕಾಂಗ್ರೆಸ್ ವಾಗ್ದಾಳಿ ಬೆನ್ನಲ್ಲೇ ಸತ್ಯ ಬಿಚ್ಚಿಟ್ಟ ವಿದ್ಯಾರ್ಥಿನಿ!

 



'ರೂ. 1.5 ಲಕ್ಷ ಲಂಚ ಕೇಳಿಲ್ಲ, ಅದು ಪಂದ್ಯಾವಳಿ ವೆಚ್ಚ': ವೈರಲ್ ವೀಡಿಯೋ ಬೆನ್ನಲ್ಲೇ ಯು-ಟರ್ನ್ ಪಡೆದ ವಿವಾದ!

ಡೆಹ್ರಾಡೂನ್:

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲೇ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ (Taekwondo) ಕ್ರೀಡಾಪಟುವೊಬ್ಬಳು ತನ್ನ ಆರ್ಥಿಕ ಸಂಕಷ್ಟವನ್ನು ವಿವರಿಸಿ ಕಣ್ಣೀರಿಟ್ಟ ಘಟನೆ, ರಾಜ್ಯದಲ್ಲಿ ದೊಡ್ಡ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಲಂಚ ಕೇಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ತದನಂತರ ವಿದ್ಯಾರ್ಥಿನಿ ಸ್ಪಷ್ಟನೆ ನೀಡಿ ಲಂಚದ ಆರೋಪವನ್ನು ನಿರಾಕರಿಸಿದ್ದಾಳೆ.

ಸಿಎಂ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶಾಹ್ರಾ:

ಆಗಸ್ಟ್ 10 ರಂದು ಡೆಹ್ರಾಡೂನ್‌ನಲ್ಲಿ ನಡೆದ 'ಮುಖ್ಯಮಂತ್ರಿ ಯುವ ವಿದ್ಯಾರ್ಥಿ ಮಂಥನ್' ಕಾರ್ಯಕ್ರಮದಲ್ಲಿ 'ಸಿಎನ್‌ಐ ಗರ್ಲ್ಸ್ ಸ್ಕೂಲ್‌'ನ 12ನೇ ತರಗತಿ ವಿದ್ಯಾರ್ಥಿನಿ ಶಾಹ್ರಾ (Shayra) ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಆಕೆ, "ನಾನು ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿದ್ದೆ. ಆದರೆ 1.5 ಲಕ್ಷ ರೂಪಾಯಿ ಹಣ ಹೊಂದಿಸಲು ಸಾಧ್ಯವಾಗದೆ ನಾನು ಆ ಅವಕಾಶ ಕಳೆದುಕೊಂಡೆ" ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದಳು. ತಕ್ಷಣವೇ ಸ್ಪಂದಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ, ವಿದ್ಯಾರ್ಥಿನಿಯನ್ನು ಸಮಾಧಾನಪಡಿಸಿ, ಆಕೆಯ ವಿವರಗಳನ್ನು ಪಡೆದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

'1.5 ಲಕ್ಷ ರೂ. ಲಂಚ ಕೇಳಿದ್ದಾರೆ' - ಕಾಂಗ್ರೆಸ್ ಗಂಭೀರ ಆರೋಪ:

ವಿದ್ಯಾರ್ಥಿನಿ ಶಾಹ್ರಾ ಕಣ್ಣೀರಿಟ್ಟ ವೀಡಿಯೋ ತುಣುಕನ್ನು ಉಲ್ಲೇಖಿಸಿ ದಾಳಿ ನಡೆಸಿದ ಕಾಂಗ್ರೆಸ್, ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು 1.5 ಲಕ್ಷ ರೂಪಾಯಿ ಲಂಚ ಕೇಳಲಾಗಿದೆ ಎಂದು ಆರೋಪಿಸಿತು. 'ಎಕ್ಸ್' (X) ಖಾತೆಯಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್, ಭ್ರಷ್ಟಾಚಾರದಿಂದಾಗಿ ಬಡ ವಿದ್ಯಾರ್ಥಿನಿಯ ಕನಸು ನುಚ್ಚುನೂರಾಗಿದೆ ಎಂದು ಕಿಡಿಕಾರಿತು.

ಅಲ್ಲದೆ, ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಹಾಗೂ ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿದ್ದ ಲೈವ್ ಪ್ರಸಾರವನ್ನು ತೆಗೆದುಹಾಕಲಾಗಿದೆ ಎಂದೂ ವಿಪಕ್ಷಗಳು ದೂರಿದ್ದವು.

ಬೆನ್ನಲ್ಲೇ ಸ್ಪಷ್ಟನೆ ನೀಡಿ ವೀಡಿಯೋ ಹಂಚಿಕೊಂಡ ವಿದ್ಯಾರ್ಥಿನಿ!

ಕಾಂಗ್ರೆಸ್‌ನ ಲಂಚದ ಆರೋಪ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ವಿದ್ಯಾರ್ಥಿನಿ ಶಾಹ್ರಾ ಹೊಸ ವೀಡಿಯೋ ಒಂದನ್ನು ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಸತ್ಯಾಸತ್ಯತೆಯನ್ನು ತೆರೆದಿಟ್ಟಿದ್ದಾಳೆ.

"ಸಿಎಂ ಕಾರ್ಯಕ್ರಮದಲ್ಲಿ ನನಗೆ ಸಂಪೂರ್ಣ ವಿಷಯ ಹೇಳಲು ಸಾಧ್ಯವಾಗಿರಲಿಲ್ಲ. ನಾನು ಜಮ್ಮುವಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ರೊಮೇನಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗೆ ಆಯ್ಕೆಯಾಗಿದ್ದೆ. ಪಂದ್ಯಾವಳಿಯ ಆಯೋಜಕರು ಒಟ್ಟು ವೆಚ್ಚದಲ್ಲಿ 1.70 ಲಕ್ಷ ರೂಪಾಯಿಯನ್ನು ಭರಿಸುವುದಾಗಿ ತಿಳಿಸಿದ್ದರು. ಇನ್ನುಳಿದ 1.5 ಲಕ್ಷ ರೂಪಾಯಿಯನ್ನು ನಾನು ಭರಿಸಬೇಕಾಗಿತ್ತು. ಈ ವಿಷಯವನ್ನು ನಾನು ನನ್ನ ಶಾಲೆಗಾಗಲಿ ಅಥವಾ ಯಾರಿಗೂ ತಿಳಿಸಿರಲಿಲ್ಲ. ಹೀಗಾಗಿ ಹಣ ಹೊಂದಿಸಲಾಗದೆ ನಾನು ರೊಮೇನಿಯಾಗೆ ಹೋಗಲು ಸಾಧ್ಯವಾಗಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾಳೆ.

ತನಗೆ ಯಾರೂ 1.5 ಲಕ್ಷ ರೂಪಾಯಿ ಲಂಚ ಕೇಳಿಲ್ಲ ಹಾಗೂ ಯಾವುದೇ ಸರ್ಕಾರಿ ಅಧಿಕಾರಿ ಹಣದ ಬೇಡಿಕೆ ಇಟ್ಟಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದು, ಆ ಹಣ ಪಂದ್ಯಾವಳಿಯಲ್ಲಿ ಭಾಗವಹಿಸಲು ತಾನು ಸ್ವತಃ ನೀಡಬೇಕಾಗಿದ್ದ ಪಾಲಿನ ಮೊತ್ತ (Self-contribution) ಎಂದು ಹೇಳಿದ್ದಾಳೆ. ಇದರೊಂದಿಗೆ ಲಂಚದ ಸುತ್ತ ಹೆಣೆದುಕೊಂಡಿದ್ದ ರಾಜಕೀಯ ವಿವಾದಕ್ಕೆ ತೆರೆಬಿದ್ದಿದೆ.