ಬರೋಬ್ಬರಿ 43 ಬೈಕ್ ಕದ್ದಿದ್ದ ಕಿಲ್ಲರ್ ಖದೀಮ ಅರೆಸ್ಟ್: ಕಿತ್ತೂರು ಪೊಲೀಸರ ಬಲೆಗೆ ಬಿದ್ದ 'ಹೀರೋ ಸ್ಪ್ಲೆಂಡರ್' ಪ್ರೇಮಿ!
30 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳು ಜಪ್ತಿ; ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವವರಿಗೆ ಎಸ್ಪಿ ಎಚ್ಚರಿಕೆ!
ಬೆಳಗಾವಿ:
ಮಾಸ್ಟರ್ ಕೀ ಬಳಸಿ ಕೇವಲ 'ಹೀರೋ ಹೊಂಡಾ' ಬ್ರಾಂಡ್‌ನ ದ್ವಿಚಕ್ರ ವಾಹನಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಕಿತ್ತೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬರೋಬ್ಬರಿ 30 ಲಕ್ಷ ರೂಪಾಯಿ ಮೌಲ್ಯದ 43 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ನಿವಾಸಿ ನಾರಾಯಣ ಮನೋಹರ ಕದಮ್ ಬಂಧಿತ ಆರೋಪಿ.
ಬೈಕ್ ಕಳವು ಜಾಡು ಹಿಡಿದು ಹೋದಾಗ ಸಿಕ್ಕಿಬಿದ್ದ ಸರಣಿ ಕಳ್ಳತನ!
ಇದೇ ವರ್ಷ ಜನವರಿ 12 ರಂದು ಕಿತ್ತೂರು ಎಪಿಎಂಸಿ ಗೇಟ್ ಬಳಿ ನಿಲ್ಲಿಸಲಾಗಿದ್ದ 'ಹೀರೋ ಸ್ಪ್ಲೆಂಡರ್ ಪ್ಲಸ್' ಬೈಕ್ ಕಳವಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರಿಗೆ ಆಗಸ್ಟ್ 4 ರಂದು ಮಹತ್ವದ ಸುಳಿವು ಲಭ್ಯವಾಯಿತು.
ಎಂ.ಕೆ. ಹುಬ್ಬಳ್ಳಿ ಪಟ್ಟಣದ ಪಾರಿಶ್ವಾಡ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಶಂಕಿತವಾಗಿ ಸಂಚರಿಸುತ್ತಿದ್ದ ನಾರಾಯಣ ಕದಮ್‌ನನ್ನು ತಡೆದು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಆತ ಕಳೆದ ಎರಡು ವರ್ಷಗಳಿಂದ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬೈಕ್ ದೋಚುತ್ತಿದ್ದ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಕಿತ್ತೂರು, ಹಿರೇಬಾಗೇವಾಡಿ, ಸಂಕೇಶ್ವರ, ಕಲಘಟಗಿ, ಯಲ್ಲಾಪುರ, ಸವದತ್ತಿ, ಗರಗ, ಕುಂದಗೋಳ, ಹಳಿಯಾಳ, ಕಾಕತಿ, ಧಾರವಾಡ ಹಾಗೂ ಹುಬ್ಬಳ್ಳಿ ಉಪನಗರ ಸೇರಿದಂತೆ ಹತ್ತಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಹೀರೋ ಬೈಕ್‌ಗಳೇ ಆತನ ಟಾರ್ಗೆಟ್ ಆಗಿದ್ದೇಕೆ?:
ಪ್ರಕರಣದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ರಾಮರಾಜನ್, "ಜಪ್ತಿ ಮಾಡಲಾದ 43 ಬೈಕ್‌ಗಳಲ್ಲಿ 41 ಹೀರೋ ಸ್ಪ್ಲೆಂಡರ್, 1 ಪ್ಯಾಶನ್ ಪ್ರೋ ಹಾಗೂ 1 ಎಚ್‌ಎಫ್ ಡಿಲಕ್ಸ್ ಸೇರಿವೆ. ಹೀರೋ ಬೈಕ್‌ಗಳಿಗೆ ಯಾವುದೇ ಮಾಸ್ಟರ್ ಕೀ ಬಳಸಿದರೂ ಸುಲಭವಾಗಿ ಸ್ಟಾರ್ಟ್ ಆಗುತ್ತಿದ್ದವು. ಹೀಗಾಗಿ ಆ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಜನದಟ್ಟಣೆ ಇರುವ ಸಂತೆಗಳಿಗೆ ಹೋಗಿ ದೋಚುತ್ತಿದ್ದ" ಎಂದಿದ್ದಾರೆ.
ಕದ್ದ ಬೈಕ್‌ಗಳನ್ನು ಆರೋಪಿ ತನ್ನ ಸ್ವಗ್ರಾಮ ನಿಡಗಲ್‌ನ ಮನೆ ಹಾಗೂ ಹೊಲದಲ್ಲಿ ಬಚ್ಚಿಡುತ್ತಿದ್ದ. ಅದರಲ್ಲಿ 15 ಬೈಕ್‌ಗಳನ್ನು ಖಾನಾಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಯಾವುದೇ ದಾಖಲೆಗಳಿಲ್ಲದೆ ತಲಾ 10 ರಿಂದ 15 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ.
ಕಡಿಮೆ ಬೆಲೆಗೆ ಬೈಕ್ ಖರೀದಿಸುವವರಿಗೆ ಎಸ್ಪಿ ಎಚ್ಚರಿಕೆ:
ಇದೇ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಎಸ್ಪಿ ಕೆ. ರಾಮರಾಜನ್, "ಯಾರಾದರೂ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವಾಗ ಕಡ್ಡಾಯವಾಗಿ ಅದರ ಆರ್‌ಸಿ ಬುಕ್ ಹಾಗೂ ಮಾಲೀಕರ ದಾಖಲೆಗಳನ್ನು ಪರಿಶೀಲಿಸಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ದಾಖಲೆ ಇಲ್ಲದ ಕಳ್ಳತನದ ಬೈಕ್ ಖರೀದಿಸಿದರೆ, ಮುಂದೆ ನೀವೇ ಕೋರ್ಟ್‌ಗೆ ಅಲೆಯಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಬೃಹತ್ ಕಳ್ಳತನ ಜಾಲವನ್ನು ಬೇಧಿಸಿದ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಭರತ್ ಎಸ್., ಪಿಎಸ್‌ಐ ಜಿ.ಜಿ. ಹಂಪಣ್ಣವರ ಹಾಗೂ ತನಿಖಾ ತಂಡಕ್ಕೆ ಎಸ್ಪಿ ರಾಮರಾಜನ್ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಆರೋಪಿಯನ್ನು ಪ್ರಸ್ತುತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
