ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಜವಾಬ್ದಾರಿಯುತ ಯುವ ಸಮೂಹವೇ ರಾಷ್ಟ್ರದ ಭವಿಷ್ಯ: ವಿವೇಕ್ ಆಳ್ವ

ಜವಾಬ್ದಾರಿಯುತ ಯುವ ಸಮೂಹವೇ ರಾಷ್ಟ್ರದ ಭವಿಷ್ಯ: ವಿವೇಕ್ ಆಳ್ವ

ಜವಾಬ್ದಾರಿಯುತ ಯುವ ಸಮೂಹವೇ ರಾಷ್ಟ್ರದ ಭವಿಷ್ಯ: ವಿವೇಕ್ ಆಳ್ವ

ಇಂಡಕ್ಷನ್ ಕಾರ್ಯಕ್ರಮ ‘ಅಂಕುರ’ ಉದ್ಘಾಟನೆ

ಇಮೇಜ್ ಕೃಪೆ: ಆಳ್ವಾಸ್

ಮೂಡುಬಿದಿರೆ: ಜವಾಬ್ದಾರಿಯನ್ನು ಸ್ವೀಕರಿಸಿದಾಗ ಮಾತ್ರ ಬದುಕಿನಲ್ಲಿ ಸ್ಥಾನಮಾನ ಮತ್ತು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಮನಸ್ಸನ್ನು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಪ್ರಮುಖ ಗುರಿಯಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಸ್ವಾಯತ್ತಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಇಂಡಕ್ಷನ್ ಕಾರ್ಯಕ್ರಮ ‘ಅಂಕುರ’ ಸೋಮವಾರ ಕೃಷಿಸಿರಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1998ರಲ್ಲಿ ಕೇವಲ 25 ವಿದ್ಯಾರ್ಥಿಗಳು, ಎರಡು ವಿಭಾಗ ಹಾಗೂ 11 ಅಧ್ಯಾಪಕರೊಂದಿಗೆ ತನ್ನ ಶೈಕ್ಷಣಿಕ ಪಯಣವನ್ನು ಆರಂಭಿಸಿದ್ದ ಆಳ್ವಾಸ್ ಸಂಸ್ಥೆ, ಇಂದು 54 ಶೈಕ್ಷಣಿಕ ಕಾರ್ಯಕ್ರಮಗಳು, 122 ತರಗತಿ ಕೊಠಡಿಗಳು, 188 ಶಿಕ್ಷಕರು ಹಾಗೂ 3,191 ವಿದ್ಯಾರ್ಥಿಗಳನ್ನು ಒಳಗೊಂಡ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆಯ ಈ ಸಾಧನೆಯ ಹಿಂದಿನ ನಿಜವಾದ ಶಕ್ತಿ ಮತ್ತು ಬ್ರ‍್ಯಾಂಡ್ ಇಲ್ಲಿನ ವಿದ್ಯಾರ್ಥಿಗಳು. ಮಕ್ಕಳು ತಮ್ಮ ಪಾಲಕರ ತ್ಯಾಗ ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಕನಸುಗಳ ಜೊತೆಗೆ ಜವಾಬ್ದಾರಿಗಳನ್ನೂ ಹೊತ್ತು ಸಾಗಬೇಕು. ತರಗತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಈ ಹಂತದಲ್ಲಿ ಗುರಿಯೆಡೆಗೆ ಗಮನ ಕೇಂದ್ರೀಕರಿಸಿ ಅನಗತ್ಯ ಆಕರ್ಷಣೆಗಳಿಂದ ದೂರವಿರಬೇಕು. ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳದು, ಬದಲಾಗಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ತಂತ್ರಜ್ಞಾನದ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಶ್ರೇಷ್ಠತೆ, ಉತ್ತಮ ಪರಿಸರ ನಿರ್ಮಾಣ ಮತ್ತು ಸಾಮಾಜಿಕ ಅರಿವಿನತ್ತ ಯುವಜನತೆ ಸಾಗಿದಾಗ ಮಾತ್ರ ಅರ್ಥಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಜವಾಬ್ದಾರಿಯುತ ಯುವ ಸಮೂಹವೇ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಚಾರ್ಯರ ಸಂದೇಶ

ಕಾಲೇಜಿನ ಪ್ರಾಚರ‍್ಯ ಡಾ. ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸುರಕ್ಷಿತ ಹಾಗೂ ಪ್ರೇರಣಾತ್ಮಕ ವಾತಾವರಣ ಅತ್ಯಗತ್ಯವಾಗಿದ್ದು, ಅಭದ್ರತೆ ಇರುವಲ್ಲಿ ಯಾವುದೇ ಸಾಧನೆ ಸಾಧ್ಯವಿಲ್ಲ ಎಂದರು. ಒಂದು ರಾಷ್ಟ್ರದ ಭವಿಷ್ಯ ರೂಪುಗೊಳ್ಳುವುದು ತರಗತಿ ಕೊಠಡಿಗಳಲ್ಲಿಯೇ. ಆದ್ದರಿಂದ ಶಿಕ್ಷಣ ಸಂಸ್ಥೆಗಳ ಪರಿಸರವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಂತಿರಬೇಕು. ಈ ಕಾರಣಕ್ಕಾಗಿಯೇ ತರಗತಿ ಕೊಠಡಿಯನ್ನು ಇಡೀ ಜಗತ್ತಿನ ಅತಿದೊಡ್ಡ ಪವರ್‌ಹೌಸ್ ಎಂದು ಪರಿಗಣಿಸಲಾಗಿದೆ. ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಚಿಂತನೆ ಹೊಂದಿದವರೊಂದಿಗೆ ಬೆರೆಯಬೇಕು. ನಕಾರಾತ್ಮಕ ಮನೋಭಾವದ ವ್ಯಕ್ತಿಗಳಿಂದ ದೂರವಿರುವುದು ವೈಯಕ್ತಿಕ ಬೆಳವಣಿಗೆ ಮತ್ತು ಯಶಸ್ಸಿಗೆ ಸಹಕಾರಿಯಾಗುತ್ತದೆ.

ಶೈಕ್ಷಣಿಕ ಮಾರ್ಗಸೂಚಿಗಳು

ಪರೀಕ್ಷಾಂಗ ಕುಲಸಚಿವ ಡಾ. ಎನ್.ಪಿ. ನಾರಾಯಣ ಶೆಟ್ಟಿ, ಕಾಲೇಜಿನ ಪರೀಕ್ಷಾ ವಿಭಾಗದ ಕಾರ್ಯವೈಖರಿ, ಪರೀಕ್ಷಾ ನಿಯಮಗಳು, ಮೌಲ್ಯಮಾಪನ ಪ್ರಕ್ರಿಯೆ ಹಾಗೂ ವಿದ್ಯಾರ್ಥಿಗಳು ಅನುಸರಿಸಬೇಕಾದ ಶೈಕ್ಷಣಿಕ ಮಾರ್ಗಸೂಚಿಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದ್ದು, ಕಾಲೇಜು ಮತ್ತು ಪೋಷಕರ ನಡುವಿನ ನಿರಂತರ ಸಂಪರ್ಕ ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ ಟಿಕೆ ರವೀಂದ್ರನ್ ಇದ್ದರು. ಡಾ ಯೋಗಿಶ್ ಕೈರೋಡಿ ಕಾರ‍್ಯಕ್ರಮ ನಿರ್ವಹಿಸಿದರು.