ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಶಾರೀಕ್ ತಪ್ಪೊಪ್ಪಿಗೆ; ಏಪ್ರಿಲ್ 25ಕ್ಕೆ ಅಂತಿಮ ತೀರ್ಪು ಪ್ರಕಟ



ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ. ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಎನ್ಐಎ (NIA) ವಿಶೇಷ ನ್ಯಾಯಾಲಯವು ಏಪ್ರಿಲ್ 25ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ತಪ್ಪೊಪ್ಪಿಗೆ ನೀಡಿದ ಶಂಕಿತ ಉಗ್ರ

ಆರಂಭದಲ್ಲಿ ತಾನು ನಿರಪರಾಧಿ ಎಂದು ವಾದಿಸಿದ್ದ ಮೊಹಮ್ಮದ್ ಶಾರೀಕ್, 2025ರ ಡಿಸೆಂಬರ್‌ನಲ್ಲಿ ದಿಢೀರ್ ಬದಲಾವಣೆ ತೋರಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. "ಎನ್ಐಎ ಅಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳು ಸತ್ಯವಾಗಿವೆ. ಕುಕ್ಕರ್‌ನಲ್ಲಿ ಐಇಡಿ (IED) ಸ್ಫೋಟಕ ಇರಿಸಿ ಸ್ಫೋಟಕ್ಕೆ ಕಾರಣನಾಗಿರುವುದು ನಾನೇ. ಈ ಕೃತ್ಯದ ಬಗ್ಗೆ ನನಗೆ ಈಗ ಪಶ್ಚಾತಾಪವಾಗುತ್ತಿದೆ, ಕಾನೂನು ಪ್ರಕಾರ ನನಗೆ ಶಿಕ್ಷೆ ನೀಡಿ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದ. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತಪ್ಪೊಪ್ಪಿಗೆಯನ್ನು ಮಾನ್ಯ ಮಾಡಿದೆ.

ಪ್ರಕರಣದ ಹಿನ್ನೆಲೆ ಏನು?

2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಸಂಜೆ 4.40ರ ಸುಮಾರಿಗೆ ಸಂಚರಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಶಂಕಿತ ಉಗ್ರ ಶಾರೀಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು. ತನಿಖೆಯ ವೇಳೆ ಇದು ಭಯೋತ್ಪಾದನಾ ಕೃತ್ಯ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಎನ್ಐಎ ತನಿಖೆ ಕೈಗೆತ್ತಿಕೊಂಡಿತ್ತು.

ಉಗ್ರರ ಭೀಕರ ಹುನ್ನಾರ ಬಯಲು

ತನಿಖೆಯ ವೇಳೆ ಶಾರೀಕ್ ಮತ್ತು ಆತನ ತಂಡದ ಭಯಾನಕ ಸ್ಕೆಚ್‌ಗಳು ಬಯಲಿಗೆ ಬಂದಿದ್ದವು. ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಮಂಗಳೂರಿನ ಕದ್ರಿ ದೇವಸ್ಥಾನ ಸೇರಿದಂತೆ ಹಲವು ಕಡೆಗಳಲ್ಲಿ ಸರಣಿ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು.

ಬಾಂಬ್ ಸ್ಫೋಟಕ್ಕೆ 90 ನಿಮಿಷಗಳ ಟೈಮರ್ ಫಿಕ್ಸ್ ಮಾಡುವ ಬದಲು, ತಾಂತ್ರಿಕ ತಪ್ಪಿನಿಂದಾಗಿ ಕೇವಲ 9 ನಿಮಿಷಕ್ಕೆ ನಿಗದಿಪಡಿಸಲಾಗಿತ್ತು. ಈ ಕಾರಣದಿಂದಾಗಿ ಶಾರೀಕ್ ತನ್ನ ಗುರಿ ತಲುಪುವ ಮೊದಲೇ ಆಟೋ ರಿಕ್ಷಾದಲ್ಲೇ ಬಾಂಬ್ ಸ್ಫೋಟಗೊಂಡಿತ್ತು. ಇದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿತ್ತು.

ಶಾರೀಕ್ ಹಿನ್ನೆಲೆ ಮತ್ತು ಉಗ್ರ ನಂಟು

ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಶಾರೀಕ್, ಐಸಿಸ್ (ISIS) ಮತ್ತು ಸಿಮಿ (SIMI) ಉಗ್ರ ಸಂಘಟನೆಗಳ ಸಿದ್ಧಾಂತದಿಂದ ಪ್ರೇರಿತನಾಗಿದ್ದ. ಈತ ಶಿವಮೊಗ್ಗ ಐಸಿಸ್ ಮಾಡ್ಯುಲ್‌ನ ಸಕ್ರಿಯ ಸದಸ್ಯನಾಗಿದ್ದ ಎನ್ನಲಾಗಿದೆ. 2020ರಲ್ಲಿ ಮಂಗಳೂರಿನಲ್ಲಿ ಪ್ರಚೋದನಾಕಾರಿ ಗೋಡೆ ಬರಹ ಬರೆದ ಪ್ರಕರಣ ಮತ್ತು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಬಾಂಬ್ ಸ್ಫೋಟ ನಡೆಸಿದ ಪ್ರಕರಣಗಳಲ್ಲೂ ಈತನೇ ಪ್ರಮುಖ ಆರೋಪಿಯಾಗಿದ್ದಾನೆ.

ಪ್ರಕರಣದ ಎರಡನೇ ಆರೋಪಿ ಸೈಯದ್ ಯಾಸೀನ್ ಬಾಂಬ್ ತಯಾರಿಕೆಗೆ ಬೇಕಾದ ಉಪಕರಣಗಳನ್ನು ಪೂರೈಸಿದ್ದ ಎಂಬ ಆರೋಪದಡಿ ಬಂಧಿತನಾಗಿದ್ದಾನೆ. ಈಗ ಪ್ರಮುಖ ಆರೋಪಿ ತಪ್ಪೊಪ್ಪಿಕೊಂಡಿರುವುದರಿಂದ ಏಪ್ರಿಲ್ 25ರಂದು ನ್ಯಾಯಾಲಯವು ಎಂತಹ ಕಠಿಣ ಶಿಕ್ಷೆ ವಿಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.


BREAKING NEWS
Loading latest news...
Join our WhatsApp Channel Powered By : Online Pudu