ಕ್ಯಾಂಪಾ ಕೋಲಾ ಪ್ರಾಂಚೈಸ್‌ ಕೊಡಿಸುವುದಾಗಿ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ. ವಂಚನೆ- ಬಿಹಾರದ ರಾಜ್ಯದ ಖದೀಮರಿಬ್ಬರು ಅರೆಸ್ಟ್




ಉಡುಪಿ: ಆನ್‌ಲೈನ್‌ನಲ್ಲಿ‌ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 6,15,000ರೂ. ಮೌಲ್ಯದ ನಗದು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರ ರಾಜ್ಯದ ಪಟ್ನಾ ಜಿಲ್ಲೆಯ ದೇವ್ ಹರ್ಷ(20) ಹಾಗೂ ಬಿಹಾರ ನಳಂದಾ ಜಿಲ್ಲೆಯ ಚಂದನ ಕುಮಾರ್(29) ಬಂಧಿತ ಆರೋಪಿಗಳು. 

ಬಂಧಿಯರಿಂದ 97ಸಾವಿರ ರೂ. ಮೌಲ್ಯದ 10 ಮೊಬೈಲ್ ಫೋನ್, 68,000ರೂ. ಮೌಲ್ಯದ 4 ಲ್ಯಾಪ್‌ಟಾಪ್‌ಗಳು ಹಾಗೂ 4,50,000ರೂ. ನಗದು ವಶಪಡಿಸಿಕೊಳ್ಳಲಾಗಿದೆ. 

ಅವಿನಾಶ್ ಎಂಬವರು ರಿಲಯನ್ಸ್ ಇಂಡಸ್ಟ್ರೀ ಮಾಲಕತ್ವದ ಕ್ಯಾಂಪಾ ಕೋಲಾ ಪ್ರಾಂಚೈಸ್‌ಗೆ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲವು ದಿನಗಳಲ್ಲಿ ಅವಿನಾಶ್‌ಗೆ ಮೇಲ್ ಹಾಗೂ‌ ಫೋನ್ ಕರೆ ಮಾಡಿ ಹೆಚ್ಚಿನ ಮಾಹಿತಿಗಾಗಿ ಕಳಲಾಗಿತ್ತು. ಇದಕ್ಕಾಗಿ ಅವಿನಾಶ್ ತಮ್ಮ ವಿದ್ಯಾಭ್ಯಾಸ, ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳನ್ನು ಕಳುಹಿಸಿದ್ದರು. ಇದನ್ನು ತಿಳಿದ ಆರೋಪಿಗಳು ಅವಿನಾಶ್‌‌ಗೆ ರಿಜಿಸ್ಟ್ರೇಷನ್, ಪ್ರೋಡಕ್ಟ್ ಬುಕಿಂಗ್‌ಗೆಂದು ಹಣ ಕೇಳಿದ್ದಾರೆ. ಅದಕ್ಕಾಗಿ ಅವರು ಹಂತ ಹಂತವಾಗಿ 5,72,500ರೂ. ಹಣವನ್ನು ಅಪರಿಚಿತರು ತಿಳಿಸಿದ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಿದ್ದರು.

ಆರೋಪಿಗಳು ಮತ್ತೆ ಮತ್ತೆ ಹಣ ಹಾಕುವಂತೆ ಒತ್ತಾಯಿಸುತ್ತಿದ್ದು, ಇದರಿಂದ ಅವಿನಾಶ್ ಸಂಶಯ ಉಂಟಾಯಿತು. ಆರೋಪಿಗಳು ಕ್ಯಾಂಪಾ ಕೋಲಾ ಪ್ರಾಂಚೈಸಿಯನ್ನು ಕೊಡುವುದಾಗಿ ನಂಬಿಸಿ ಒಟ್ಟು 5,72,500ರೂ. ಹಣ ಪಡೆದುಕೊಂಡು ವಂಚಿಸಿದ್ದಾರೆಂದು ಅವಿನಾಶ್ ನೀಡಿದ ದೂರಿನಂತೆ ಉಡುಪಿ ಸೆನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್‌ ತಂಡ, ಬಿಹಾರ ರಾಜ್ಯದ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನಿಲೇಶ್ ಜಿ.ಚವ್ಹಾಣ್, ಪೊಲೀಸ್‌ ಉಪನಿರೀಕ್ಷಕ ಅಶೋಕ್ ಕುಮಾರ್, ಸೈಬರ್ ಕ್ರೈಂ ಪೊಲೀಸ್‌ ಠಾಣಾ ಸಿಬ್ಬಂದಿ ರಾಘವೇಂದ್ರ ಕಾರ್ಕಡ, ಪ್ರವೀಣ್ ಕುಮಾ‌ರ್, ಪ್ರವೀಣ ಶೆಟ್ಟಿಗಾರ್, ರಾಜೇಶ್, ದೀಕ್ಷಿತ್, ಎಎಸ್ಸೆ ಉಮೇಶ್ ಜೋಗಿ, ಯತೀನ್, ವೆಂಕಟೇಶ್, ಧರ್ಮಪ್ಪ ಹೇಮರಾಜ್, ನಿಲೇಶ್, ಪವನ್ ಹಾಗೂ ದಿನೇಶ್ ಈ ಕಾರ್ಯಾಚರಣೆಯಲ್ಲಿ ನಡೆಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu