ಮಂಗಳೂರು: ನಟೋರಿಯಸ್ ರೌಡಿ ಟೋಪಿ ನೌಫಾಲ್ ತಲವಾರಿನಿಂದ ಕಡಿದು ಕೊಲೆ


ಮಂಗಳೂರು: ನಟೋರಿಯಸ್ ರೌಡಿ ಟೋಪಿ ನೌಫಾಲ್ (38) ಎಂಬಾತನನ್ನು ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿ ತಲವಾರಿನಿಂದ ಕಡಿದು ಭೀಕರವಾಗಿ ಕೊಲೆಗೈಯ್ಯಲಾಗಿದೆ.

ಟೋಪಿ ನೌಫಾಲ್ ಮಂಗಳೂರು ನಗರದ ಬಜಾಲ್ ಫೈಸಲ್ ನಗರ ನಿವಾಸಿ. ಈತ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 25ಕ್ಕೂ ಅಧಿಕ ಕೇಸುಗಳನ್ನು ಎದುರಿಸುತ್ತಿದ್ದ. ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಿದ ಬಳಿಕ ಕಾಸರಗೋಡು ಭಾಗದಲ್ಲಿ ಸಕ್ರಿಯವಾಗಿದ್ದ. ಇಂದು ಬೆಳಗ್ಗೆ 8ಗಂಟೆ ವೇಳೆಗೆ ಉಪ್ಪಳ ಗೇಟ್ ಬಳಿಗೆ ಕರೆಸಿದ್ದ ತಂಡ ಅಲ್ಲಿಯೇ ತಲವಾರುಗಳಿಂದ ಕಡಿದು ಹಾಕಿದೆ ಎನ್ನಲಾಗುತ್ತಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿದ್ದು ಮೃತದೇಹವನ್ನು ಪೆರಿಯಾರಂ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಿದ್ದು ಪೋಸ್ಟ್ ಮಾರ್ಟಂ ಬಳಿಕ ಕೊಲೆಯ ಬಗ್ಗೆ ತಿಳಿಯಬಹುದು ಎಂದಿದ್ದಾರೆ.

ರೈಲ್ವೇ ಟ್ರಾಕ್ ಬಳಿಯಲ್ಲೇ ಮೃತದೇಹ ಬಿದ್ದಿದ್ದು ತಲೆ, ಕುತ್ತಿಗೆ ಭಾಗಕ್ಕೆ ಕಡಿದ ಗುರುತುಗಳಿವೆ. ಅಲ್ಲದೆ, ಮೃತದೇಹದ ದೇಹದಲ್ಲಿ ಬನಿಯಾನ್ ಮತ್ತು ಪ್ಯಾಂಟ್ ಮಾತ್ರ ಇದ್ದು ಹೊಡೆದಾಟ ಸಂದರ್ಭದಲ್ಲಿ ಶರ್ಟ್ ಎಳೆದುಕೊಂಡು ಹೋಗಿದೆಯಾ ಎನ್ನುವ ಸಂಶಯ ಇದೆ. 

 ಟೋಪಿ ನೌಫಾಲ್ ಮಂಗಳೂರಿನಲ್ಲಿ ನಟೋರಿಯಸ್ ರೌಡಿಗಳೊಂದಿಗೆ ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ. 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಜಿಯಾ ಮತ್ತು ಇನ್ನೊಬ್ಬನ ಡಬಲ್ ಮರ್ಡ‌ರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ. ಆ ಸಂದರ್ಭದಲ್ಲಿ ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ ಜೊತೆಗೆ ಗುರುತಿಸಿಕೊಂಡಿದ್ದ.

ತಲ್ಲತ್ ಮತ್ತು ಜಬ್ಬಾರ್ ನ್ಯೂಟ್ರಲ್ ಆದಬಳಿಕ ನೌಫಾಲ್ ತನ್ನದೇ ತಂಡ ಕಟ್ಟಿಕೊಂಡು ಕೊಲೆಯತ್ನ, ವಸೂಲಿ, ಡ್ರಗ್ಸ್‌, ಅಕ್ರಮ ಗೋಲ್ಡ್ ವಹಿವಾಟಿನಲ್ಲಿ ಸಕ್ರಿಯವಾಗಿದ್ದ. ಕಂಕನಾಡಿ ನಗರ, ವಾಮಂಜೂರು, ಸುರತ್ಕಲ್, ಕಾವೂರು ಸೇರಿ ಹಲವಾರು ಕಡೆಗಳಲ್ಲಿ ಕೇಸುಗಳನ್ನು ಹೊಂದಿದ್ದಾನೆ. ಜಿಯಾ ಕೊಲೆ ಕೇಸಿನಲ್ಲಿ ಈತನೇ ಪ್ರಮುಖ ಆರೋಪಿಯಾಗಿದ್ದ. ಇದೀಗ ಉಪ್ಪಳ ಗೇಟ್ ಬಳಿಯಲ್ಲಿ ಕೊಲೆ ಆಗಿರುವುದರಿಂದ ಅಲ್ಲಿನದ್ದೇ ಗ್ಯಾಂಗ್ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ. ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu