ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠದ ಆವರಣದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೃಷ್ಣನೂರು ಉಡುಪಿಗೆ ಶುಕ್ರವಾರ ಆಗಮಿಸಿದರು.
ಭಾರತೀಯ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ಮೋದಿಯವರು ಬೆಳಗ್ಗೆ 10.20ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ರಾಜ್ಯ ಸರಕಾರದ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಧಾನಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದು, ಪ್ರಧಾನಿಗಳನ್ನು ಸ್ವಾಗತಿಸಿದರು.
*2ಕಿಮೀ ರೋಡ್ ಶೋ*
ಮಂಗಳೂರು ವಿಮಾನ ನಿಲ್ದಾಣದಿಂದ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಳಗ್ಗೆ 11ಗಂಟೆಗೆ ಉಡುಪಿ ತಲುಪಿದರು. ಆದಿ ಉಡುಪಿ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಪ್ರಧಾನಿ ಮೋದಿಯವರು ಬನ್ನಂಜೆಯಿಂದ ಕಲ್ಸಂಕದವರೆಗೆ ಎರಡು ಕಿಮೀ ಉದ್ದಕ್ಕೆ ಅದ್ದೂರಿ ರೋಡ್ ಶೋ ನಡೆಸಿದರು. ಮೋದಿಯವರನ್ನು ಕಂಡು ರಸ್ತೆಯ ಇಕ್ಕೆಲಗಳಲ್ಲಿ ಸೇರಿರುವ ಸಾವಿರಾರು ಜನರು ಹರ್ಷೋದ್ಘಾರ ನಡೆಸುತ್ತಿದ್ದರೆ ಕಪ್ಪು ಕಾರಿನಲ್ಲಿ ಬಿಳಿ ಕುರ್ತಾ ಕಪ್ಪು ಜಾಕೆಟ್ ಧರಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಜನರತ್ತ ಕೈ ಬೀಸಿ ಸಾಗಿದರು. ಬಿಗಿ ಭದ್ರತೆಯ ನಡುವೆ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಭಾಗವಹಿಸಿದರು. ಸೇರಿದ್ದ ಸಾವಿರಾರು ಮಂದಿ ಪ್ರಧಾನಿ ಮೋದಿ ಅವರನ್ನು ಹತ್ತಿರದಲ್ಲಿ ಕಂಡು ಪುಳಕಿತರಾದರು. ಕಾರಿನ ಬಾಗಿಲು ತೆರೆದು ಮೋದಿ ಕೈಬೀಸುತ್ತಾ ಸಾಗುತ್ತಿದ್ದಂತೆ ಸೇರಿದ್ದ ಜನರು ಅವರತ್ತ ಹೂವನ್ನು ಎಸೆದು ಹರ್ಷೋದ್ಗಾರ ಮೂಡಿಸಿದರು.
ಈ ವೇಳೆ ಪ್ರಧಾನಿ ಮೋದಿಯವರನ್ನು ಪುಟಾಣಿಗಳು ಕೃಷ್ಣ ರಾಧೆಯರ ನೃತ್ಯದ ಮೂಲಕ ಸ್ವಾಗತಿಸಿದರು. ಅಲ್ಲದೆ ವೇದಿಕೆಯಲ್ಲಿ ನವಿಲು ನೃತ್ಯ, ಪಾಂಡುರಂಗ - ತುಕಾರಾಂ ನೃತ್ಯ, ಶಂಖ ನಾದ ರೋಡ್ ಶೋಗೆ ಮೆರುಗು ನೀಡಿತು. ರೋಡ್ ಶೋ ಉದ್ದಕ್ಕೂ ಸಾಂಸ್ಕೃತಿಕ ವೈಭವ ಮೇಳೈಸಿತ್ತು. ಹುಲಿವೇಷ, ಯಕ್ಷಗಾನ ಮತ್ತಿತರರ ಸಾಂಸ್ಕೃತಿಕ ತಂಡಗಳು ರೋಡ್ ಶೋ ವೈಭವವನ್ನು ಇನ್ನಷ್ಟು ಹೆಚ್ಚಿಸಿತ್ತು.
*ಕನಕ ಕವಚ ಉದ್ಘಾಟನೆ*
ಶ್ರೀಕೃಷ್ಣ ಮಠದ ರಥಬೀದಿಗೆ ಪ್ರವೇಶದ ಬಳಿಕ ಕನಕ ಮಂದಿರಕ್ಕೆ ಭೇಟಿ ಬಳಿಕ ಕನಕನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಕನಕ ಕಿಂಡಿಗೆ ಜೋಡಿಸಿರುವ ಕನಕ ಕವಚ ಉದ್ಘಾಟನೆ ಮಾಡಿದ ಬಳಿಕ, ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನ ಮಾಡಿದರು. ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿದ ಬಳಿಕ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಬಳಿಕ ಮೋದಿಯವರು ಮುಖ್ಯಪ್ರಾಣ, ಗರುಡ ದೇವರ ದರ್ಶನ ಮಾಡಿದರು.
ಈ ವೇಳೆ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ 2ಕೋಟಿ ರೂ. ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ ಕಾಮಗಾರಿ ಮೋದಿಯವರಿಂದ ಉದ್ಘಾಟನೆಗೊಂಡಿತು.
ಬಳಿಕ ಮಠಾಧೀಶರೊಂದಿಗೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿದರು. ಮಠದ ಪರಿಸರದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ ನಡೆಯಿತು. ಪ್ರಧಾನಿ ಮೋದಿಯವರಿಗೆ ಕೃಷ್ಣದೇವರ ಪ್ರಸಾದ ವಿತರಣೆ ಗೌರವಾರ್ಪಣೆ ನಡೆಯಿತು.
ಶ್ರೀಕೃಷ್ಣ ಮಠದಿಂದ ಗೀತಾ ಮಂದಿರಕ್ಕೆ ತೆರಳಿದ ಮೋದಿಯವರಿಗೆ ವಿವಿಧ ವಾದ್ಯಗಳನ್ನು ನುಡಿಸಿ ಕಲಾವಿದರು ಸ್ವಾಗತಿಸಿದರು. ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ ನಡೆಯಿತು. ಧ್ಯಾನ ಮಂದಿರದ ಗೋಡೆಯ ಶಿಲೆಯಲ್ಲಿ ಭಗವದ್ಗೀತೆ ಬರಹ ಅನಾವರಣಗೊಳಿಸಿದ ಮೋದಿಯವರು ಧ್ಯಾನ ಮಂದಿರ ವೀಕ್ಷಣೆ ಮಾಡಿದರು. ಬಳಿಕ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾದ ಮೋದಿಯವರು ಭಗವದ್ಗೀತೆಯ 15ನೇ ಭಾಗವನ್ನು ಪಠಿಸಿದರು.
ಮೋದಿಗೆ 'ಭಾರತ ಭಾಗ್ಯ ವಿಧಾತ' ಬಿರುದು
ಸಂಸ್ಕೃತದಲ್ಲಿ ಪ್ರಾಸ್ತಾವಿಕ ಮಾತನಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು, ಅರ್ಜುನ ಇಂದ್ರನ ಅವತಾರಿ, ನರೇಂದ್ರ ಅಂದರೆ ಈ ದೇಶಕ್ಕೆ ಅರ್ಜುನ, ಅರ್ಜುನ ರೂಪದಲ್ಲಿ ಮೋದಿಯವರು ಉಡುಪಿಗೆ ಆಗಮಿಸಿದ್ದಾರೆ. ಅರ್ಜುನ ಆಗಮನದೊಂದಿಗೆ ಲಕ್ಷ ಕಂಠ ಗೀತ ಗಾಯನ ಸಂಪೂರ್ಣ ಆಗಿದೆಯೆಂದು ನಾವು ಭಾವಿಸುತ್ತೇವೆ ಎಂದರು.
ಶ್ರೀಕೃಷ್ಣ ಗೀತೆಯಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡು ಎಂದಿದ್ದಾನೆ. ಮೋದಿಯವರು ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಧರ್ಮದ ರಕ್ಷಣೆಗಾಗಿ ಮೋದಿಯವರಿದ್ದಾರೆ. ಅವರಿಗೆ ವಿಶೇಷವಾಗಿ ಭಾರತ ಭಾಗ್ಯ ವಿಧಾತ ಎನ್ನುವ ಪ್ರಶಸ್ತಿಯೊಂದಿಗೆ ಕೃಷ್ಣಾನುಗ್ರಹ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿ ಮೋದಿಯವರಿಗೆ ರಕ್ಷಾ ಕವಚ ಕಟ್ಟುವ ಮೂಲಕ ರಾಷ್ಟ್ರ ರಕ್ಷಣೆಯ ದೀಕ್ಷೆಯನ್ನು ಸ್ವಾಮೀಜಿ ನೀಡಿದರು. ಬಳಿಕ ಕೃಷ್ಣನ ನವಿಲು ಗರಿಯಿರುವ ಪೇಟವನ್ನು ತೊಡಿಸಿ ಸನ್ಮಾನಿಸಿದರು.
ಮೋದಿ ಹೇಳಿದ 9ಸಂಕಲ್ಪಗಳು
ಲಕ್ಷ ಕಂಠ ಗೀತಾ ಪಾರಾಯಣ ಅದ್ದೂರಿ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ನವ ಸಂಕಲ್ಪಗಳಿಗೆ ಬದ್ಧರಾಗಲು ಜನರನ್ನು ಹುರಿದುಂಬಿಸಿದರು.
ಭಗವದ್ಗೀತೆ ನಮಗೆ ಜೀವನ ಸಂಕಲ್ಪದ ಬೋಧನೆ ಮಾಡುತ್ತದೆ. ಈ ಪ್ರೇರಣೆಯಿಂದ ನವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಉಡುಪಿ ಜನಸಂಘದ ಕಾಲದಿಂದಲೂ ದೇಶಕ್ಕೆ ಮಾದರಿ ಕೊಟ್ಟ ನಗರ. ಬಿಜೆಪಿಗೆ ಸುಶಾಸನದ ಮಾಡೆಲ್ ನೀಡಿದ್ದೇ ಉಡುಪಿ. 1968ರಲ್ಲಿ ಮೊದಲ ಬಾರಿಗೆ ವಿಎಸ್ ಆಚಾರ್ಯ ನೇತೃತ್ವದಲ್ಲಿ ಉಡುಪಿ ನಗರಸಭೆಯನ್ನು ಬಿಜೆಪಿ ಜಯಿಸಿತ್ತು. ನಗರಸಭೆ ಮೂಲಕ ಆಡಳಿತದ ಮಾದರಿಯನ್ನು ತೋರಿಸಿಕೊಟ್ಟಿದ್ದರು. ಸ್ವಚ್ಛತೆ, ಒಳಚರಂಡಿ ವಿಚಾರದಲ್ಲಿಯೂ ಉಡುಪಿ ಮಾಡೆಲ್ ಆಗಿದೆ. ಎಂದು ಮೋದಿ ಹೇಳಿದರು.
ರಾಮಚರಿತ ಮಾನಸದಲ್ಲಿ ತುಳಸೀದಾಸರು ಕಲಿಯುಗದಲ್ಲಿ ಕೇವಲ ಭಗವನ್ನಾಮ ಸಂಕೀರ್ತನೆಯಿಂದ ಪರಮ ಸಾಧನೆ ಪಡೆಯಬಹುದು ಎಂದು ಹೇಳಿದ್ದಾರೆ. ಒಂದು ಲಕ್ಷ ಜನರ ಸಹಯೋಗದಲ್ಲಿ ಒಂದೇ ಸ್ವರದಲ್ಲಿ ಗೀತಾ ಪಠಣದೊಂದಿಗೆ ಭಗವನ್ನಾಮ ಸ್ಮರಣೆ ಮಾಡಿರುವುದು ಮನಸ್ಸು, ಬುದ್ದಿಗೆ ಹೊಸ ಶಕ್ತಿ ನೀಡಿದೆ. ಇದುವೇ ನಮ್ಮ ಆಧ್ಯಾತ್ಮಿಕ ಶಕ್ತಿ, ಸಮಾಜದ ಏಕತೆಯ ಶಕ್ತಿ. ಇದಕ್ಕಾಗಿ ಪೂಜ್ಯ ಸುಗುಣೇಂದ್ರ ತೀರ್ಥರಿಗೆ ಪ್ರಣಾಮ ಸಲ್ಲಿಸುತ್ತೇನೆ. ಲಕ್ಷ ಕಂಠ ಗೀತಾ ಪಠಣ, ಕೋಟಿ ಗೀತಾ ಲೇಖನ ಯಜ್ಞ ಮೂಲಕ ಸನಾತನ ಪರಂಪರೆಯಲ್ಲಿ ಹೊಸ ಆಂದೋಲನ ಆರಂಭಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದರು.
ಅಯೋಧ್ಯೆಯಲ್ಲಿ ಮಧ್ವಚಾರ್ಯ ದ್ವಾರ
ನವೆಂಬರ್ 25ರಂದು ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಪೂರ್ಣಗೊಂಡು ಧರ್ಮ ಧ್ವಜ ಸ್ಥಾಪನೆಯಾಗಿದೆ. ದಶಕಗಳ ಹಿಂದೆ ಉಡುಪಿಯ ವಿಶ್ವೇಶ ತೀರ್ಥರು ರಾಮ ಮಂದಿರ ಆಂದೋಲನ ಆರಂಭಿಸಿದ್ದರು. ರಾಮನ ಮಂದಿರ ಸಂಪೂರ್ಣಗೊಂಡು ಶ್ರೀಗಳ ಅಪೇಕ್ಷೆ ಈಡೇರಿದೆ. ರಾಮನ ಬಗ್ಗೆ ಶ್ಲೋಕಗಳನ್ನು ರಚಿಸಿದ್ದ ಮಧ್ವಾಚಾರ್ಯರ ಹೆಸರಲ್ಲಿ ಅಯೋಧ್ಯೆಯಲ್ಲಿ ವಿಶಾಲ ದ್ವಾರ ಸ್ಥಾಪಿಸಲಾಗಿದೆ. ಮಧ್ವರು ದೈತ ದರ್ಶನದ ಮೂಲಕ ಉಡುಪಿಯಲ್ಲಿ ಅಷ್ಟಮಠಗಳ ಪರಂಪರೆ ಹುಟ್ಟುಹಾಕಿದ್ದಲ್ಲದೆ, ಭಕ್ತಿ, ಸೇವಾ, ಜ್ಞಾನದ ಸಂಗಮ ಕ್ಷೇತ್ರವನ್ನು ಸ್ಥಾಪಿಸಿದ್ದಾರೆ.
ಪುರಂದರದಾಸರು, ಕನಕದಾಸರು ಕನ್ನಡದಲ್ಲಿ ದೇವರ ಶ್ಲೋಕ, ಪದಗಳನ್ನು ರಚಿಸಿ ಜನರಿಗೆ ಭಕ್ತಿಯೋಗವನ್ನು ತೋರಿಸಿದವರು. ಅಂಥ ಕನಕದಾಸರಿಗೆ ನಮನ ಸಲ್ಲಿಸುವ ಭಾಗ್ಯವೂ ನನಗೆ ಸಿಕ್ಕಿದೆ ಎಂದು ಹೇಳಿದ ಮೋದಿ, ಧರ್ಮಕ್ಕೆ ಗ್ಲಾನಿಯಾದಾಗ ಮತ್ತೆ ಹುಟ್ಟಿ ಬರುತ್ತೇನೆ ಎಂದಿರುವ ಕೃಷ್ಣ ಗೀತೆಯನ್ನು ಹೇಳಿರುವುದು ಲೋಕ ಕಲ್ಯಾಣಕ್ಕಾಗಿ. ಸರ್ವ ಜನ ಹಿತಾಯ, ಸರ್ವ ಜನ ಸುಖಾಯ ಎನ್ನುವ ಕೃಷ್ಣನ ಶ್ಲೋಕಗಳಿಂದಲೇ ಪ್ರೇರಿತಗೊಂಡು ಸರ್ಕಾರದ ಯೋಜನೆಗಳನ್ನು ಆರಂಭಿಸಲಾಗಿದೆ ಎಂದರು.
ವಿರೋಧಿಗಳಿಗೆ ಸುದರ್ಶನ ಬಳಕೆ
ವಸುಧೈವ ಕುಟುಂಬಕಂ ಜೊತೆಗೆ ಧರ್ಮೋ ರಕ್ಷತಿ ರಕ್ಷಿತಂ ಎಂದೂ ಕೃಷ್ಣ ಹೇಳಿದ್ದಾನೆ. ಧರ್ಮ ವಿರೋಧಿಗಳಿಗೆ ಸುದರ್ಶನ್ ಚಕ್ರ ಬಳಸುವುದಕ್ಕೂ ಹೇಳಿದ್ದಾನೆ. ವಿರೋಧಿಗಳನ್ನು ಭೇದಿಸಲು ಜೊತೆಗೆ ಸಾತ್ವಿಜರನ್ನು ರಕ್ಷಿಸಲು ನಾವು ಸುದರ್ಶನ ಚಕ್ರ ಬಳಸಿದ್ದೇವೆ. ಪಹಲ್ಗಾಮ್ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನೂ ಮಾಡಿದ್ದೇವೆ ಎಂದರು. ಆಪರೇಶನ್ ಸಿಂಧೂರ ಕೃಷ್ಣನ ಸಂದೇಶದಂತೆ ಮಾಡಿದ್ದೇವೆ ಎಂದು ಹೇಳಿದರು.
*ದೇಶಕ್ಕಾಗಿ ನವ ಸಂಕಲ್ಪಕ್ಕೆ ಮೋದಿ ಸೂಚನೆ*
1. ಜಲ ಸಂರಕ್ಷಣೆ: ಪ್ರತಿಯೊಬ್ಬರೂ ಜಲ ಸಂರಕ್ಷಣೆಗೆ ಮಹತ್ವ ನೀಡಬೇಕು, ನದಿಗಳನ್ನು ಉಳಿಸಬೇಕು
2. ಪರಿಸರ ರಕ್ಷಣೆ ; ದೇಶದೆಲ್ಲೆಡೆ ತಾಯಿಯ ಹೆಸರಿನಲ್ಲಿ ಒಂದು ಗಿಡ ನಡುವ ಅಭಿಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಮಠಗಳ ಸಾಮರ್ಥ್ಯ ಸೇರಿದರೆ ಪ್ರಭಾವ ಇನ್ನಷ್ಟು ವ್ಯಾಪಕವಾಗುತ್ತದೆ.
3. ಕನಿಷ್ಠ ಒಬ್ಬ ಬಡವರ ಜೀವನ ಸುಧಾರಣೆ: ಕನಿಷ್ಠ ಒಬ್ಬ ಬಡವನ ಜೀವನ ಸುಧಾರಿಸಲು ಪ್ರಯತ್ನಿಸಬೇಕು, ನಾನು ಹೆಚ್ಚು ಹೇಳುವುದಿಲ್ಲ
4. ಸ್ವದೇಶಿ ವಿಚಾರ- ಜವಾಬ್ದಾರಿಯುತ ನಾಗರಿಕರಾಗಿ ಸ್ವದೇಶಿಯನ್ನು ನಮ್ಮದಾಗಿಸಿಕೊಳ್ಳಬೇಕು. ಇಂದು ಭಾರತ ಆತ್ಮನಿರ್ಭರ ಭಾರತ, ಮತ್ತು ಸ್ವದೇಶಿ ಮಂತ್ರದಲ್ಲಿ ಮುನ್ನಡೆಯುತ್ತಿದೆ. ನಮ್ಮ ಆರ್ಥಿಕ ವ್ಯವಸ್ಥೆ, ಉದ್ಯೋಗ, ತಂತ್ರಜ್ಞಾನ ಎಲ್ಲವೂ ಸ್ವಾವಲಂಭಿಯಾಗಿ ಬೆಳೆಯುತ್ತಿದೆ. ಹೀಗಾಗಿ ನಾವು ಜೋರು ಜೋರಾಗಿ ವೋಕಲ್ ಫಾರ್ ಲೋಕಲ್ ಎನ್ನಬೇಕು.
5. ನೇತ್ರ ದಾನ
6. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದು, ಊಟದಲ್ಲಿ ಎಣ್ಣೆ ಬಳಕೆ ಕಡಿಮೆ ಮಾಡಿ, ಸಿರಿಧಾನ್ಯ ಬಳಕೆ ಮಾಡಿ
7. ಯೋಗ ಯುಕ್ತ ಜೀವನ : ಯೋಗ ಜೀವನದ ಭಾಗವಾಗಿಸಿ
8. ಪುರಾತನ ಪಾಂಡು ಲಿಪಿ ಸಂರಕ್ಷಣೆ
9. ಕನಿಷ್ಠ 25 ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ನಮ್ಮ ವಿರಾಸತ್ ಬೆಳೆಸಿ ನವ ಸಂಕಲ್ಪಗಳಿಗೆ ಬದ್ಧರಾಗರಲು ಸೂಚಿಸಿದರು.
ಈ ಸಂದರ್ಭ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹೋಟ್, ಸಚಿವ ಪ್ರಹ್ಲಾದ ಜೋಷಿ, ವಿಜಯೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರಿದ್ದರು.
ಮಧ್ಯಾಹ್ನ 1.20ರ ವೇಳೆಗೆ ಉಡುಪಿಗೆ ವಿದಾಯ ಹೇಳಿದ ಮೋದಿಯವರು ಉಡುಪಿ ಮಠದಿಂದ ಆದಿ ಉಡುಪಿ ಹೆಲಿಪ್ಯಾಡ್‌ಗೆ ರಸ್ತೆ ಮಾರ್ಗವಾಗಿ ಬೆಂಗಾವಲು ವಾಹನದಲ್ಲಿ ತೆರಳಿದರು. ಅಲ್ಲಿ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದರು. ಬಳಿಕ ಅಲ್ಲಿಂದ ವಿಶೇಷ ವಿಮಾನದ ಮೂಲಕ ಗೋವಾದ ಶ್ರೀ ಪರ್ತಗಾಳಿ ಮಠಕ್ಕೆ ತೆರಳಿದರು. ಅಲ್ಲಿ ಮಠದ 555ನೇ ಕಾರ್ಯಕ್ರಮದಲ್ಲಿ ಮೋದಿಯವರು ಮಧ್ಯಾಹ್ನದ ಬಳಿಕ ಭಾಗವಹಿಸಲಿದ್ದಾರೆ.