-->
'ಆಪರೇಷನ್ ಸಿಂಧೂರ್': ಪಹಲ್ಗಾಮ್ ದಾಳಿಗೆ  ಪ್ರತೀಕಾರ ತೀರಿಸಿದ ಭಾರತೀಯ ಸೇನೆ- ಪಾಕ್‌ ಉಗ್ರರ ತಾಣಗಳ ಮೇಲೆ ದಾಳಿ

'ಆಪರೇಷನ್ ಸಿಂಧೂರ್': ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿದ ಭಾರತೀಯ ಸೇನೆ- ಪಾಕ್‌ ಉಗ್ರರ ತಾಣಗಳ ಮೇಲೆ ದಾಳಿ

ನವದೆಹಲಿ : ಭಾರತದ ಸೇನಾಪಡೆ ಮಂಗಳವಾರ ನಸುಕಿನ ವೇಳೆ “ಆಪರೇಷನ್ ಸಿಂಧೂರ್" ಎಂಬ ದಿಟ್ಟ ಕಾರ್ಯಾಚರಣೆ ನಡೆಸಿ ಪಾಕ್‌ನ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದೆ. ಮುಂಜಾವಿನ ವೇಳೆ ಅಂದರೆ, ಬೆಳಗ್ಗಿನ 1:28ರಿಂದ 1:51ರವರೆಗೆ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಾಯುಪಡೆಯು ಪಾಕ್‌ನ ಉಗ್ರರ ಅಡುಗುತಾಣಗಳನ್ನು ನಾಶ ಮಾಡಿದೆ. ಬರೋಬ್ಬರಿ 23 ನಿಮಿಷಗಳಲ್ಲಿ ಉಗ್ರರನ್ನು ಮಟ್ಟ ಹಾಕಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.

ಪಿಒಕೆಯೊಂದಿಗೆ ಸೇರಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿದೆ. ಇದರಲ್ಲಿ ಒಟ್ಟು 9ಭಯೋತ್ಪಾದಕ ಶಿಬಿರಗಳನ್ನು ನಾಶವಾಗಿರುವ ಮಾಹಿತಿ ಲಭ್ಯವಾಗಿದೆ. ಈ ದಾಳಿಯಲ್ಲಿ ಸುಮಾರು 30ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಆದರೆ ಪಾಕಿಸ್ತಾನವು ಕೇವಲ 8 ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ವಾದಿಸಿದೆ.

ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಮತ್ತು ಮುಜಫರಾಬಾದ್, ಪಂಜಾಬ್‌ನ ಬಹವಾಲ್ಪುರ್ ಮತ್ತು ಲಾಹೋರ್‌ನ ಒಂದು ಸ್ಥಳದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಸಂದರ್ಭದಲ್ಲಿ, 'ಆಕಾಶದಿಂದ ನೆಲಕ್ಕೆ' ಕ್ಷಿಪಣಿಗಳನ್ನು ಹಾರಿಸಲಾಯಿತು. ದಾಳಿಯ ಬಳಿಕ, ಭಾರತೀಯ ಸೇನೆಯು ಎಕ್ಸ್ ಖಾತೆಯಲ್ಲಿ 'ನ್ಯಾಯ ಸಿಕ್ಕಿದೆ.. ಜೈ ಹಿಂದ್' ಎಂದು ಪೋಸ್ಟ್ ಮಾಡಿದೆ. ಇವು ಸರ್ಜಿಕಲ್ ಸ್ಟೈಕ್‌ಗಳಲ್ಲ. ದಾಳಿಗಳನ್ನು ಭಾರತೀಯ ಪ್ರದೇಶದಿಂದ ಅತ್ಯಂತ ನಿಖರವಾಗಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪುರುಷರ ಮೇಲೆ ಮಾತ್ರ ಗುಂಡು ಹಾರಿಸಿ ಕೊಲ್ಲುವ ಮೂಲಕ ಅನೇಕ ಭಾರತೀಯ ಮಹಿಳೆಯರ ಹಣೆಯ ಸಿಂಧೂರವನ್ನು ಒರೆಸಿದ್ದರಿಂದ ಈ ಕಾರ್ಯಾಚರಣೆಗೆ 'ಸಿಂಧೂರ್' ಎಂದು ಹೆಸರಿಡಲಾಗಿದೆ. ಮಸೂದ್ ಅಜರ್‌ ಮತ್ತು ಹಫೀಜ್ ಸಯೀದ್‌ನ ಪ್ರಮುಖ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ. ಭಾರತದ ದಾಳಿಯ ನಂತರ, ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.

ಭಾರತೀಯ ದಾಳಿಗಳನ್ನು ದೃಢಪಡಿಸಿದ ಪಾಕಿಸ್ತಾನ, ಪ್ರತೀಕಾರದ ದಾಳಿಗಳನ್ನು ನಡೆಸುವುದಾಗಿ ಘೋಷಿಸಿದೆ. ಭಾರತೀಯ ಸೇನೆಯು ದಾಳಿಗಳು ಬೆಳಗಿನ ಜಾವ 1:44 ಕ್ಕೆ ನಡೆದಿವೆ ಎಂದು ಅಧಿಕೃತವಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ದಾಳಿಯ ನಂತರ ರಾಜನಾಥ್ ಸಿಂಗ್ ಟ್ವಿಟರ್‌ನಲ್ಲಿ ಭಾರತ್ ಮಾತಾ ಕಿ ಜೈ ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ, ದಾಳಿಗಳ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ. 

Ads on article

Advertise in articles 1

advertising articles 2

Advertise under the article