ಸಾಮೂಹಿಕ ವಿವಾಹದ ನೆಪದಲ್ಲಿ ಬಡ ಯುವತಿಯರ ಮಾರಾಟ ಜಾಲ- ಖತರ್ನಾಕ್‌ ಎನ್‌ಜಿಒ ಪೊಲೀಸ್ ಬಲೆಗೆ



ಜೈಪುರ: ಸಾಮೂಹಿಕ ವಿವಾಹ ಮಾಡಲಾಗುತ್ತದೆ ಎಂದು ನಂಬಿಸಿ ಬಡ ಯುವತಿಯರನ್ನು ಮಾರಾಟ ಮಾಡುತ್ತಿದ್ದ ಖತರ್ನಾಕ್‌ ಎನ್‌ಜಿಒ ತಂಡವೊಂದನ್ನು ರಾಜಸ್ಥಾನ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.

ರಾಜಸ್ತಾನದ ರಾಜಧಾನಿ ಜೈಪುರ ಸಮೀಪದಲ್ಲಿ ಸಾಮೂಹಿಕ ವಿವಾಹದ ನೆಪದಲ್ಲಿ ಬಡ ಯುವತಿಯರನ್ನು ಪುರುಷರಿಗೆ ಮಾರಾಟ ಮಾಡುತ್ತಿದ್ದ ಬೃಹತ್ ಎನ್‌ಜಿಒ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇದರೊಂದಿಗೆ ಬಹುದೊಡ್ಡ ಮಾನವ ಕಳ್ಳ ಸಾಗಣೆಯ ಜಾಲವನ್ನು ಬಯಲಿಗೆ ತಂದಿದೆ. ಸಾಮೂಹಿಕ ವಿವಾಹ ಆಯೋಜನೆ ಮಾಡುತ್ತಿದ್ದ ಎನ್‌ಜಿಒ ಸಂಘಟನೆಯೊಂದು ಯುವತಿಯರನ್ನು 2.5 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿತ್ತು ಎಂಬ ಆರೋಪ ಇದೆ.

ಬಡ ಕುಟುಂಬಗಳ ಮಹಿಳೆಯರಿಗಾಗಿ ಎನ್‌ಜಿಒ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿತ್ತು. ಬಡ ಕುಟುಂಬಗಳಿಂದ ಯುವತಿಯರನ್ನು ಕಳ್ಳಸಾಗಣೆ ಮಾಡುವ ಏಜೆಂಟ್‌ಗಳಿಂದ 'ಖರೀದಿಸಿ' ವಧುವನ್ನು ಹುಡುಕುತ್ತಿರುವ ಯುವಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಪುರದಿಂದ ಸುಮಾರು 30 ಕಿ.ಮೀ ದೂರದ ಬಸ್ಸಿಯ ಸುಜನ್‌ಪುರ ಗ್ರಾಮದಲ್ಲಿ ಗಾಯತ್ರಿ ಸರ್ವ ಸಮಾಜ ಪ್ರತಿಷ್ಠಾನ ಎಂಬ ಎನ್ ಜಿಓ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂಸ್ಥೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದಾಗಿ ಹೇಳಿಕೊಂಡಿತ್ತು. ಗಾಯತ್ರಿ ಎಂಬ ಮಹಿಳೆ ಇದರ ಮುಖ್ಯಸ್ಥಳಾಗಿದ್ದು, ಮದುವೆಯಾಗಲು ಬಯಸುತ್ತಿದ್ದ ಯುವಕರಿಗೆ ಹುಡುಗಿಯರ ಫೋಟೋ ತೋರಿಸಿ ಅವರಿಂದ ಹಣ ಪಡೆದು ಯುವತಿಯರನ್ನು ಮಾರಾಟ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.