ಅಮೇರಿಕಾದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 260ಕೋಟಿ ರೂ. ಪರಿಹಾರ



ಸಿಯಾಟಲ್: ಅಮೆರಿಕದ ಸಿಯಾಟಲ್‌ನಲ್ಲಿ ಅತಿ ವೇಗವಾಗಿ ಬಂದ ಪೊಲೀಸ್‌ ವಾಹನವೊಂದು ಡಿಕ್ಕಿಯಾಗಿ ಸಾವನ್ನಪ್ಪಿದ 23 ವರ್ಷದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲ ಅವರ ಕುಟುಂಬಕ್ಕೆ ಸಿಯಾಟಲ್ ಸ್ಥಳೀಯಾಡಳಿತವು ಭಾರಿ ಮೊತ್ತದ ಪರಿಹಾರ ಘೋಷಿಸಿದೆ.

ಸುಮಾರು 29 ಮಿಲಿಯನ್ ಡಾಲರ್ (ಅಂದಾಜು 262 ಕೋಟಿ ರೂಪಾಯಿ) ಹಣವನ್ನು ರಾಜಿ ಒಪ್ಪಂದದ ಭಾಗವಾಗಿ ನೀಡಲು ಸ್ಥಳೀಯಾಡಳಿತ ಒಪ್ಪಿಕೊಂಡಿದೆ.

2023ರಲ್ಲಿ ಸಂಭವಿಸಿದ ಈ ದುರಂತ ಪ್ರಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷವಾಗಿ ಭಾರತೀಯ ಮೂಲದ ವಿದ್ಯಾರ್ಥಿನಿಯ ಸಾವಿನ ಬಗ್ಗೆ ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬನು ಅಮಾನವೀಯವಾಗಿ ಮಾತನಾಡಿದ್ದನು. ಇದರ ವಿಡಿಯೋ ವೈರಲ್ ಆಗಿ ಭಾರತದ ರಾಜತಾಂತ್ರಿಕ ವಲಯದಲ್ಲೂ ಚರ್ಚೆಯಾಗಿತ್ತು.

ಘಟನೆಯ ಹಿನ್ನೆಲೆ:

ಈಶಾನ್ಯ ವಿಶ್ವವಿದ್ಯಾಲಯದ ಸಿಯಾಟಲ್ ಕ್ಯಾಂಪಸ್‌ನಲ್ಲಿ ಮಾಹಿತಿ ವ್ಯವಸ್ಥೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಜಾಹ್ನವಿ ಕಂದುಲ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಗಂಟೆಗೆ 25 ಮೈಲಿ ವೇಗದ ಮಿತಿಯಿದ್ದ ಪ್ರದೇಶದಲ್ಲಿ ಪೊಲೀಸ್‌ ಅಧಿಕಾರಿ ಕೆವಿನ್ ಡೇವ್ ಸುಮಾರು 74 ಮೈಲಿ (119 ಕಿ.ಮೀ.) ವೇಗದಲ್ಲಿ ವಾಹನ ಚಲಾಯಿಸಿಕೊಂಡು ಬಂದು ಜಾಹ್ನವಿಗೆ ಡಿಕ್ಕಿ ಹೊಡೆದಿದ್ದಾನೆ. 

ಈ ಅಪಘಾತದ ಬಳಿಕ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಡೇನಿಯಲ್ ಆಡೆರರ್ ಅವರ ಬಾಡಿ ಕ್ಯಾಮೆರಾದಲ್ಲಿ ಸೆರೆಯಾದ ಸಂಭಾಷಣೆ ಭಾರಿ ವಿವಾದ ಸೃಷ್ಟಿಸಿತ್ತು. ಆತ "ಆಕೆಗೆ ಕೇವಲ 26 ವರ್ಷ ವಯಸ್ಸಾಗಿತ್ತು, ಆಕೆಯ ಜೀವಕ್ಕೆ ಹೆಚ್ಚಿನ ಮೌಲ್ಯವಿಲ್ಲ ಒಂದು ಚೆಕ್ ಬರೆದು ಕೊಟ್ಟರೆ ಸಾಕು ಎಂದು ನಗುತ್ತಾ ಹೇಳಿದ್ದು ಜಗತ್ತಿನಾದ್ಯಂತ ಟೀಕೆಗೆ ಗುರಿಯಾಗಿತ್ತು.

ಜಾಹ್ನವಿ ಕುಟುಂಬದ ಪರ ವಕೀಲರು ಕಿಂಗ್ ಕೌಂಟಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಸುದೀರ್ಘ ಕಾನೂನು ಹೋರಾಟದ ಬಳಿಕ ಇದೀಗ ಈ ರಾಜಿ ಸಂಧಾನ ಏರ್ಪಟ್ಟಿದೆ. ವಿವಾದಾತ್ಮಕ ಹೇಳಿಕೆ ನೀಡಿದ್ದ ಅಧಿಕಾರಿ ಡೇನಿಯಲ್ ಆಡೆರ‌ರ್ ಮತ್ತು ವಾಹನ ಚಲಾಯಿಸುತ್ತಿದ್ದ ಕೆವಿನ್ ಡೇವ್ ಇಬ್ಬರನ್ನೂ ಇಲಾಖೆಯಿಂದ ವಜಾಗೊಳಿಸಲಾಗಿದೆ.

ಒಟ್ಟು 262 ಕೋ. ರೂ. ಪರಿಹಾರದ ಪೈಕಿ ಸುಮಾರು180 ಕೋ. ರೂ.ಅನ್ನು ವಿಮಾ ಕಂಪನಿ ಭರಿಸಲಿದ್ದು, ಬಾಕಿ ಹಣವನ್ನು ಸ್ಥಳೀಯಾಡಳಿತ ಸಂಸ್ಥೆಯು ನೀಡಲಿದೆ.
BREAKING NEWS
Loading latest news...
Join our WhatsApp Channel Powered By : Online Pudu