ಮಂಗಳೂರು: ಪಾರ್ಟಿಗೆ ಬಂದಿದ್ದ ಯುವತಿಯ ಅತ್ಯಾಚಾರಗೈದ ಅಪರಾಧಿಗೆ 10ವರ್ಷ ಕಠಿಣ ಸಜೆ, ದಂಡ


ಮಂಗಳೂರು: ಪಾರ್ಟಿಗೆ ಬಂದಿದ್ದ ಯುವತಿಗೆ ಪ್ರಜ್ಞೆ ತಪ್ಪುವ ಪದಾರ್ಥ ಮಿಕ್ಸ್ ಮಾಡಿದ್ದ ವೈನ್ ನೀಡಿ ಅತ್ಯಾಚಾರಗೈದ ಅಪರಾಧಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿನ ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಮಂಗಳೂರಿನ ಹಂಪನಕಟ್ಟೆಯ ಲೈಟ್‌ಹೌಸ್‌ ಹಿಲ್ ರಸ್ತೆ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಶಿಕ್ಷೆಗೊಳಗಾದ ಅಪರಾಧಿ

ಸಂತ್ರಸ್ತೆ ಬ್ಯಾಂಕ್ ಉದ್ಯೋಗಿಯಾಗಿದ್ದು, ಆಕೆಗೆ ನೌಕಾಪಡೆಯಲ್ಲಿ ನೌಕರಿಯಲ್ಲಿದ್ದ ಜಾಯ್‌ಲಿನ್ ಗ್ಲಾನೆಲ್ ಪಿಂಟೋ ಎಂಬಾತ ಪರಿಚಿತನಾಗಿದ್ದ. ಆತನಿಗೆ ಅಂಡಮಾನ್‌ಗೆ ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ 2021ರ ಫೆ.5ರಂದು ಸ್ನೇಹಿತರಿಗಾಗಿ ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿನ ಮನೆಯೊಂದರಲ್ಲಿ ಪಾರ್ಟಿ ಆಯೋಜಿಸಿದ್ದ. ಈ ಪಾರ್ಟಿಗೆ ಯುವತಿಯೂ ಬಂದಿದ್ದಳು. ಈ ಪಾರ್ಟಿಗೆ ಕ್ಯಾಟರಿಂಗ್ ಸರಬರಾಜಿನ ವ್ಯವಸ್ಥೆ ಮಾಡಿದ್ದ ಬ್ರಯಾನ್ ಅಮನ್ನಾ ಯುವತಿಗೆ ತನ್ನನ್ನು ಜಾಯಿಲಿನ್ ಸ್ನೇಹಿತ ಎಂದು ಪರಿಚಯಿಸಿಕೊಂಡಿದ್ದ. 

ಈ ವೇಳೆ ಬ್ರಯಾನ್ ಅಮನ್ನಾ ಆಕೆಗೆ ವೈನ್‌ಗೆ ಪ್ರಜ್ಞೆ ತಪ್ಪುವ ಅಮಲು ಪದಾರ್ಥವನ್ನು ಬೆರೆಸಿ  ಒತ್ತಾಯಪಡಿಸಿ ನೀಡಿದ್ದ. ಬಳಿಕ ಯುವತಿ ಕೊಠಡಿಗೆ ಹೋಗಿ ನಿದ್ದೆಗೆ ಜಾರಿದ್ದಳು. 5ಗಂಟೆಗೆ ಎಚ್ಚರವಾದಾಗ ಬ್ರಯಾನ್ ಅಮನ್ನಾ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈ ಬಗ್ಗೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಠಾಣಾ ನಿರೀಕ್ಷಕ ತಿಮ್ಮಪ್ಪ ನಾಯ್ಕ ತನಿಖೆ ಪೂರ್ಣಗೊಳಿಸಿ ಬ್ರಯಾನ್ ಅಮನ್ನಾ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376ರಡಿ 10ವರ್ಷ ಕಠಿನ ಕಾರಾಗೃಹವಾಸ ಶಿಕ್ಷೆ ಮತ್ತು 10ಸಾವಿರ ರೂ. ದಂಡ, ಕಲಂ 378ರಡಿ 5ವರ್ಷ ಕಾರಾಗೃಹವಾಸದ ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಯುವತಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಸರಕಾರದ ಪರವಾಗಿ ಭಾಗಶಃ ಸಾಕ್ಷಿ ವಿಚಾರಣೆಯನ್ನು ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ನಡೆಸಿದ್ದು, ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಉಳಿದ ಸಾಕ್ಷಿ ವಿಚಾರಣೆ ನಡೆಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu