ನಟಿ ರಮ್ಯಾ ದಾಖಲಿಸಿದ ಮಾನನಷ್ಟ ಕೇಸ್ ಊರ್ಜಿತ- ಪತ್ರಕರ್ತ ವಿಶ್ವೇಶ್ವರ ಭಟ್ ಗೆ ಸಂಕಷ್ಟ! RAMYA
ಹೊಸದಿಲ್ಲಿ: ಏಷ್ಯಾನೆಟ್ ನ್ಯೂಸ್ ನೆಟ್ ವರ್ಕ್ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಚಿತ್ರ ನಟಿ ರಮ್ಯಾ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿರುವುದು ಪತ್ರಕರ್ತ ವಿಶ್ವೇಶ್ವರ ಭಟ್ ಗೆ ಸಂಕಷ್ಟ ತಂದೊಡ್ಡಿದೆ.
ಕ್ರಿಕೆಟ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‌ನಲ್ಲಿ ರಮ್ಯಾ ಪಾತ್ರವಿದೆ ಎಂದು ಸುದ್ದಿಯನ್ನು ಪ್ರಸಾರ ಮಾಡಿದ್ದ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಹಾಗೂ ವಿಶ್ವೇಶ್ವರ ಭಟ್ ವಿರುದ್ದ ನಟಿ ರಮ್ಯಾ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
"ಸುದ್ದಿ ಪ್ರಸಾರ ಮಾಡುವಾಗ ಫಿಕ್ಸಿಂಗ್ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಥಳುಕು ಹಾಕಲಾಗಿದೆ. ಪದೇ ಪದೇ ಸುದ್ದಿ ಬಿತ್ತರ ಮಾಡುವ ಮೂಲಕ ನನ್ನ ಗೌರವಕ್ಕೆ ಚ್ಯುತಿ ತರಲಾಗಿದೆ'' ಎಂದು ರಮ್ಯಾ ದೂರಿನಲ್ಲಿ ಉಲ್ಲೇಖ ಮಾಡಿದ್ದರು.
ಪ್ರಕರಣ ರದ್ದುಕೋರಿ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರ್ದಿವಾಲ, ನ್ಯಾ.ಮನೋಜ್ ಮಿಶ್ರಾ ಅವರಿದ್ದ ಪೀಠ, ಪ್ರಕರಣ ರದ್ದು ಮಾಡಲು ನಿರಾಕರಿಸಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು.
“ಬೆಟ್ಟಿಂಗ್ ಆರೋಪದಲ್ಲಿ ಆಕೆಯ 'ಹೆಸರನ್ನು ಪದೇಪದೆ ಬಳಸಲಾಗಿದೆ. ಆಧಾರರಹಿತ ಆರೋಪ ಮಾಡಿದಂತಿದೆ,'' ಎಂದಿರುವ ನ್ಯಾಯಪೀಠ, : 'ಪ್ರಕರಣ ರದ್ದುಕೋರಿದ ಅರ್ಜಿ
ದಾರರು ಬೆಟ್ಟಿಂಗ್ ಹಗರಣದಲ್ಲಿ ಆಕೆಯ ಪಾತ್ರ ಸಾಬೀತು ಮಾಡುವಂತಹ ಯಾವುದೇ ಪುರಾವೆಗಳನ್ನು ಸಲ್ಲಿಸಲು ವಿಫಲವಾಗಿದ್ದಾರೆ. ಆದ ಕಾರಣ ಅರ್ಜಿ ವಜಾಗೊಳಿಸಲಾಗಿದೆ," ಎಂದು ತಿಳಿಸಿದೆ.