ಬಾಲಕಿ ರೇಪ್: ಆರೋಪಿ ಬೇಕರಿ ಧ್ವಂಸ ಮಾಡಿದ ಅಯೋಧ್ಯೆ ಜಿಲ್ಲಾಡಳಿತ | Ayodhya



 ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮೊಯಿದ್ ಖಾನ್‌ಗೆ ಸೇರಿದ ಬೇಕರಿಯನ್ನು ಬುಲ್ಡೋಜರ್ ಮೂಲಕ ತೆರವುಗೊಳಿಸಲಾಗಿದೆ.


ಕೆರೆಯೊಂದರ ಮೇಲೆ  ಬೇಕರಿಯನ್ನು ಅಕ್ರಮವಾಗಿ  ನಿರ್ಮಿಸಲಾಗಿತ್ತು. ಹೀಗಾಗಿ ಅದನ್ನು ಕೆಡವಿ ಹಾಕಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. 


ಸಿಎಂ ಯೋಗಿ ಅದಿತ್ಯನಾಥ್ ಅವರನ್ನು ಬಾಲಕಿಯ - ತಾಯಿ ಗುರುವಾರ ಭೇಟಿಯಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಖಾನ್ ಮತ್ತು ಆತನ ಸಹಚರ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ, ಅದನ್ನು ವೀಡಿಯೋ ಮಾಡಿದ್ದಾರೆ. ಬಾಲಕಿ ಗರ್ಭಿಣಿಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತು. ಜು. 30ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.


ಮೊಯಿದ್ ಖಾನ್ ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡನಾಗಿದ್ದಾನೆ.


ಲೈಂಗಿಕ ದೌರ್ಜನ್ಯ ಪ್ರಕರಣವು ಉತ್ತರಪ್ರದೇಶ ವಿಧಾನಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಬಾಲಕಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.


ಡಿಎನ್ಎ ಟೆಸ್ಟ್ ಆಗಲಿ

ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಪ್ರತಿಕ್ರೀಯಿಸಿರುವ ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ " ಸಂತ್ರಸ್ತೆಗೆ ನ್ಯಾಯ ಸಿಗಬೇಕು. ಅದಕ್ಕೂ ಮುನ್ನ ಡಿಎನ್ಎ ಪರೀಕ್ಷೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.