-->
1000938341
30ವರ್ಷಗಳ ಹಿಂದೆ ತೀರಿಹೋದ ಯುವತಿಗೆ ಮದುವೆ ಮಾಡಿಸಲು 'ಪ್ರೇತವರ' ಬೇಕಾಗಿದೆ...! - ವೈರಲ್ ಆಗುತ್ತಿದೆ ವಿಚಿತ್ರ ಜಾಹಿರಾತು

30ವರ್ಷಗಳ ಹಿಂದೆ ತೀರಿಹೋದ ಯುವತಿಗೆ ಮದುವೆ ಮಾಡಿಸಲು 'ಪ್ರೇತವರ' ಬೇಕಾಗಿದೆ...! - ವೈರಲ್ ಆಗುತ್ತಿದೆ ವಿಚಿತ್ರ ಜಾಹಿರಾತು




ಮಂಗಳೂರು:  ಕರಾವಳಿಯಲ್ಲಿ ಪ್ರೇತವರ ಬೇಕಾಗಿದೆ ಎಂಬ ಪೇಪರ್ ಜಾಹಿರಾತು ಕಟ್ಟಿಂಗ್ ಭಾರೀ ಸದ್ದು ಮಾಡುತ್ತಿದೆ. ಜಾಹಿರಾತಿನಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಮೃತಪಟ್ಟ ಯುವತಿಗೆ ಮದುವೆ ಮಾಡಿಸಲು ಪ್ರೇತವರ ಬೇಕು ಎಂದು ನೀಡಿರುವ ಜಾಹೀರಾತು ಭಾರಿ ಚರ್ಚೆಗೆ ಕಾರಣವಾಗಿದೆ.


 ಈ ಜಾಹಿರಾತಿನಲ್ಲಿ ಏನಿತ್ತು ಗೊತ್ತೇ?

'30 ವರ್ಷಗಳ ಹಿಂದೆ ತೀರಿಹೋದ ಹೆಣ್ಣುಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷದ ಹಿಂದೆ ತೀರಿ ಹೋದ ಗಂಡುಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ' ಎಂದು ಜಾಹೀರಾತು ನೀಡಲಾಗಿತ್ತು.


 ತಮಗೆ ಬೇಕಾದ ಸಂಬಂಧ ಕೂಡಾವಳಿ ಆಗದಿದ್ದರಿಂದಲೇ ಗತಿಸಿಹೋದ ಮಗುವಿನ ಕುಟುಂಬಸ್ಥರು ಜಾಹಿರಾತು ಮೊರೆಹೋಗಿದ್ದರು. ಈ ಜಾಹಿರಾತು ಕಟ್ಟಿಂಗ್ ಭಾರೀ ವೈರಲ್ ಆಗಿತ್ತು. ಜಾಹಿರಾತು ನೀಡಿದವರಿಗೆ ಒಂದಷ್ಟು ಪ್ರತಿಕ್ರಿಯೆಗಳು ಬಂದಿದ್ದೂ ಇದೆಯಂತೆ. ಮದುವೆಯೂ ನಿಗದಿಯಾಗುವ ಎಲ್ಲಾ ಸಕಾರಾತ್ಮಕ ಪ್ರತಿಕ್ರಿಯೆಯೂ ಬಂದಿದೆಯಂತೆ. ಆದರೆ ಇದು ಹಾಸ್ಯದ ಸರಕಲ್ಲ‌. ಒಂದು ಕ್ಷಣ ಆಲೋಚನೆ ಮಾಡಿದರೆ ತುಳುವರಿಗೆ ಗತಿಸಿ ಹೋದವರ ಬಗ್ಗೆಯೂ ಎಷ್ಟೊಂದು ಭಾವನಾತ್ಮಕ ನಂಟು ಇದೆ ಎಂಬುದನ್ನು ತಿಳಿಸುತ್ತದೆ. 


ಮದುವೆಯಾಗದೆ ಹೆಣ್ಣು ಅಥವಾ ಗಂಡು ಮೃತಪಟ್ಟರೆ ಅವರಿಗೆ ಸದ್ಗತಿಯಿಲ್ಲ ಎಂಬುದು ತುಳುವರ ಬಲವಾದ ನಂಬಿಕೆ. ಆದ್ದರಿಂದ ಅದೃಶ್ಯರೂಪದಲ್ಲಿ ತಮ್ಮ ಕುಟುಂಬದೊಂದಿಗೆ ಸದಾಕಾಲ ಜೀವಿಸುತ್ತಿರುವ ಅವಿವಾಹಿತರಿಗೆ ಮದುವೆಯ ಸಂಸ್ಕಾರಕ್ಕಾಗಿ ಪ್ರೇತಮದುವೆ ಮಾಡಿಸಲಾಗುತ್ತದೆ‌. ಆದ್ದರಿಂದ ಮದುವೆಯಾಗದೆ ಸತ್ತವರು ಪ್ರಾಯಪ್ರಬುದ್ಧವಾಗುವ ಹೊತ್ತಿಗೆ ತಮ್ಮ ಇತರ ಜೀವಂತ ಮಕ್ಕಳಂತೆ ಆ ಮಗುವಿನ ಮದುವೆಯ ಬಗ್ಗೆಯೂ ಕುಟುಂಬಸ್ಥರು ಚಿಂತನೆ ಮಾಡುತ್ತಾರೆ‌. ಕೆಲವೊಂದು ಕಡೆಗಳಲ್ಲಿ ಗತಿಸಿದವರೇ ತಮ್ಮ ಮದುವೆಯ ಬಗ್ಗೆ ಕುಟುಂಬದವರಿಗೆ ತೊಂದರೆ ನೀಡಿ ನೆನಪಿಸೋದು ಇದೆ. 


ಆದ್ದರಿಂದ ಕುಟುಂಬಸ್ಥರು ಜಾತಿ, ಬಳಿ ನೋಡಿ ಹೆಣ್ಣು - ಗಂಡು ಒಪ್ಪಿಗೆಯಾಗಿ ಕೂಡಾವಳಿ ಆದಲ್ಲಿ ಪ್ರೇತಮದುವೆ ಮಾಡಿಸುತ್ತಾರೆ. ಮದುವೆಯೆಂದರೆ ಇದು ಕಾಟಾಚಾರದ ಮದುವೆಯಲ್ಲ. ಜೀವಂತ ಇರುವವರ ಮದುವೆಯ ರೀತಿಯಲ್ಲಿಯೇ ಹೆಣ್ಣು - ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ನಿಶ್ಚಿತಾರ್ಥ, ಮದುವೆ ದಿನ ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗುತ್ತದೆ‌. ಧಾರೆಯ ಬಳಿಕ ಸೇರಿದವರಿಗೆ ಮದುವೆಯ ಊಟವನ್ನು ಬಡಿಸಲಾಗುತ್ತದೆ‌. ಸಾಧಾರಣ ಪ್ರೇತಮದುವೆ ಆಷಾಢ ತಿಂಗಳ ರಾತ್ರಿ ವೇಳೆ ನಡೆಯುವುದು ಸಂಪ್ರದಾಯ.


Ads on article

Advertise in articles 1

advertising articles 2

Advertise under the article