ಮಂಗಳೂರು: ಆತ್ಮರಕ್ಷಣೆಗೆ ಹೆಣ್ಣುಮಕ್ಕಳು ತಮ್ಮೊಂದಿಗೆ ಕಿರುಗತ್ತಿ ಇರಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು - ವಿಎಚ್ ಪಿ
Saturday, April 20, 2024
ಮಂಗಳೂರು: ರಾಜ್ಯದ ಹೆಣ್ಣುಮಕ್ಕಳು ತಮ್ಮ ಆತ್ಮರಕ್ಷಣೆಗೆ ತಮ್ಮೊಂದಿಗೆ ಕಿರುಗತ್ತಿ ಇರಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು. ಜೊತೆಗೆ ಆತ್ಮರಕ್ಷಣೆಗೆ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಬೇಕೆಂದು ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಒತ್ತಾಯಿಸಿದ್ದಾರೆ.
ನಗರದ ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿ, ನೇಹಾ ಹಿರೇಮಠ ಹತ್ಯೆ ಪ್ರಕರಣದಿಂದ ಹಿಡಿದು ರಾಜ್ಯದಲ್ಲಿ ಬಹಳಷ್ಟು ಹೆಣ್ಣುಮಕ್ಕಳ ಮೇಲೆ ಹತ್ಯೆ, ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಲೇ ಇದೆ. ಆದ್ದರಿಂದ ಪಂಜಾಬ್ ನಲ್ಲಿ ಸಿಖ್ ಮಹಿಳೆಯರಿಗೆ ತಮ್ಮ ಆತ್ಮರಕ್ಷಣೆ ಮಾಡಲು ಕಿರ್ಫತ್ ಎಂಬ ಕಿರುಗತ್ತಿಯನ್ನು ಹಿಡಿಯಲು ಅವಕಾಶವಿದೆ. ಅದೇ ಮಾದರಿಯ ಕಿರುಗತ್ತಿಯನ್ನು ತಮ್ಮ ಆತ್ಮರಕ್ಷಣೆಗೆ ಹಿಡಿಯಲು ರಾಜ್ಯ ಸರಕಾರ ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದರು.
ನೇಹಾ ಹಿರೇಮಠ್ ಹತ್ಯೆ ಪ್ರಕರಣದಲ್ಲಿ ಜಿಹಾದಿ ಮನಸ್ಥಿತಿಯ ಫಯಾಝ್ ನೀಚ ಕೃತ್ಯ ಎಸಗಿದ್ದಾನೆ. ಈ ಕೃತ್ಯಕ್ಕೆ ಈತನ ಐದಾರು ಸ್ನೇಹಿತರ ಸಹಕಾರ ಇರುವ ಶಂಕೆಯಿದೆ. ಈ ಬಗ್ಗೆಯೂ ತನಿಖೆ ನಡೆಯಬೇಕು. ಅಲ್ಲದೆ. ಈ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿ ಆರೋಪಿ ಫಯಾಝ್ ಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಶರಣ್ ಪಂಪ್ ವೆಲ್ ಆಗ್ರಹಿಸಿದರು.