ನವದೆಹಲಿ: ಉತ್ತರ ಪ್ರದೇಶದಲ್ಲಿ ಚಲಿಸುವ ಕಾರಿನಿಂದ ತನ್ನ ಪ್ರೇಯಸಿಯನ್ನು ತಳ್ಳಿರುವ ಯುವಕ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ 19ವರ್ಷದ ಯುವತಿಯನ್ನು ಆಕೆಯ ಪ್ರೇಮಿ ಹೆದ್ದಾರಿಯಲ್ಲಿ ಚಲಿಸುವ ಕಾರಿನಿಂದ ಹೊರಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತುರ್ಕಪಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಮಧುರಿಯಾ ಇಂಟರ್ ಕಾಲೇಜು ಬಳಿ ಇಂದು ಸಂಜೆ ಈ ಘಟನೆ ನಡೆದಿದೆ. ಕೊಲ್ಕತ್ತಾ ಮೂಲದ ಯುವತಿ ಅಮ್ಜದ್ ಅಲಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಆಕೆಯೊಂದಿಗೆ ಜಗಳವಾಡಿ, ತನ್ನ ಸ್ನೇಹಿತನ ಸಹಾಯದಿಂದ ಆಕೆಯನ್ನು ಕಾರಿನಿಂದ ಹೊರಗೆಸೆದಿದ್ದಾನೆ.
ಆರೋಪಿಯೊಂದಿಗೆ ಸುಮಾರು 2 ವರ್ಷಗಳಿಂದ ಸಂಬಂಧ ಹೊಂದಿರುವುದಾಗಿ ಯುವತಿ ತಿಳಿಸಿದ್ದಾಳೆ. ಆಕೆ ಸದ್ಯ 2 ತಿಂಗಳ ಗರ್ಭಿಣಿಯಾಗಿದ್ದಳು. ಆರೋಪಿಯು ಗರ್ಭಪಾತ ಮಾಡಿಸಿಕೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದನು” ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ಆರ್ಕೆಸ್ಟ್ರಾ ಗುಂಪಿನೊಂದಿಗೆ ಕೆಲಸ ಮಾಡಲು ಉತ್ತರ ಪ್ರದೇಶದ ಕುಶಿನಗರಕ್ಕೆ ಬಂದಿದ್ದಳು. ಈ ಸಂದರ್ಭ ಅಮ್ಜದ್ ಎಂಬ ಯುವಕ ಆಕೆಯನ್ನು ಪರಿಚಯ ಮಾಡಿಕೊಂಡ. ಬಳಿಕ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿದೆ. ಇದರಿಂದ ಗರ್ಭಿಣಿಯಾಗಿದ್ದ ಆಕೆಯನ್ನು ಗರ್ಭಪಾತಕ್ಕಾಗಿ ಒತ್ತಾಯಿಸುತ್ತಿದ್ದ. ಆತ ಆಕೆಯನ್ನು ಕಾರಿನಲ್ಲಿ ಫಾಜಿಲ್‌ನಗರಕ್ಕೆ ಕರೆದೊಯ್ಯುತ್ತಿದ್ದಾಗ ಆಕೆ ಗಲಾಟೆ ಮಾಡಿದ್ದಳು. ಹೀಗಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ಚಲಿಸುತ್ತಿದ್ದ ಕಾರಿನಿಂದ ಹೊರಗೆ ತಳ್ಳಿದ್ದಾನೆ ಎನ್ನಲಾಗಿದೆ.
ಸಂತ್ರಸ್ತ ಯುವತಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯ ಬಳಿಕ ದೂರಿನ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.