ರಾತ್ರಿವೇಳೆ ಲೇಡಿಸ್ ಹಾಸ್ಟೆಲ್ ಗೆ ನುಗ್ಗಿ ಸಿಕ್ಕಿಬಿದ್ದ ಸ್ವರ್ಣ ಪದಕ ವಿಜೇತ ವೈಟ್ ಲಿಫ್ಟರ್ - ಪ್ಯಾರಿಸ್ ಒಲಿಂಪಿಕ್ ನಿಂದ ವಂಚಿತಗೊಂಡ ಅಚಿಂತ ಶೆಯುಲಿ


ನವದೆಹಲಿ: ರಾತ್ರಿ ವೇಳೆ ಮಹಿಳಾ ಹಾಸ್ಟೆಲ್ ಗೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ವೈಟ್ ಲಿಫ್ಟರ್ ಅಚಿಂತ ಶೆಯುಲಿ ಪ್ಯಾರಿಸ್ ಒಲಿಂಪಿಕ್ಸ್ ಪೂರ್ವಸಿದ್ಧತಾ ಶಿಬಿರದಿಂದ ಹೊರಬಿದ್ದಿದ್ದಾರೆ. ಇದರಿಂದ 73 ಕೆಜಿ ವಿಭಾಗದ ಅಚಿಂತ ಶೆಯುಲಿ(22) ವೈಟ್‌ಲಿಫ್ಟಿಂಗ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.

ಗುರುವಾರ ರಾತ್ರಿಯ ವೇಳೆ ಅಚಿಂತ ಅವರು ಪಟಿಯಾಲದ ಎನ್‌ಐಎಸ್‌ನಲ್ಲಿ ರಾತ್ರಿಯ ವೇಳೆಗೆ ಮಹಿಳೆಯರ ಹಾಸ್ಟೆಲ್‌ಗೆ ನುಗ್ಗಲು ಯತ್ನಿಸಿದ್ದಾರೆ. ಪ್ರವೇಶ ಮಾಡಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಈ ಘಟನೆಯ ವೀಡಿಯೋ ಆ ಬಳಿಕ ವೈರಲ್ ಆಗಿತ್ತು. ಈ ವೀಡಿಯೋ ಪ್ರಮುಖ ಸಾಕ್ಷಿ ಆಗಿದ್ದರಿಂದ ಯಾವುದೇ ಹೆಚ್ಚಿನ ತನಿಖೆಯನ್ನೂ ನಡೆಸದೆ ಅಚಿಂತ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಈ ಶಿಬಿರದಿಂದ ಹೊರಬಿದ್ದ ಪರಿಣಾಮ ಅಚಿಂತ, ಈ ತಿಂಗಳು ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಒಲಿಂಪಿಕ್ಸ್‌ ಅರ್ಹತೆಗಾಗಿ ನಡೆಯಲಿರುವ ಐಡಬ್ಲ್ಯುಎಫ್ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಅವಕಾಶ ವಂಚಿತರಾಗಿದ್ದಾರೆ. ಇದು ಅವರ ಪ್ಯಾರಿಸ್ ಒಲಿಂಪಿಕ್ಸ್ ಕನಸನ್ನೂ ಭಗ್ನಗೊಳಿಸಿದೆ. 

ಒಲಿಂಪಿಕ್ಸ್ ಅರ್ಹತಾ ರ್ಯಾಂಕಿಂಗ್‌ನಲ್ಲಿ 27ನೇ ಸ್ಥಾನದಲ್ಲಿದ್ದ ಅಚಿಂತ, ಕಾಂಟಿನೆಂಟಲ್ ಕೋಟಾದಲ್ಲಿ ಅರ್ಹತೆ ಅವಕಾಶ ಹೊಂದಿದ್ದರು. ಅಶಿಸ್ತಿನ ವರ್ತನೆಯಿಂದ ಅಚಿಂತರನ್ನು ತಕ್ಷಣ ಶಿಬಿರದಿಂದ ಹೊರಹಾಕಲಾಗಿದೆ ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದ ಅಧಿಕಾರಿ ತಿಳಿಸಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಎನ್ ಐಎಸ್‌ ಪಟಿಯಾಲದ ನಿರ್ದೇಶಕ ವಿನೀತ್ ಕುಮಾರ್ ಗಮನಕ್ಕೂ ತರಲಾಗಿದೆ. ಪಟಿಯಾಲದಲ್ಲಿ ಪುರುಷ-ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿವೆ. ಮಹಿಳಾ ಹಾಸ್ಟೆಲ್‌ನಲ್ಲಿ ಸದ್ಯ ಮಹಿಳಾ ಬಾಕ್ಸರ್‌ಗಳು, ಅಥ್ಲೀಟ್‌ಗಳು ಮತ್ತು ಕುಸ್ತಿಪಟುಗಳು ಇದ್ದಾರೆ.