ಮಂಗಳೂರು: ಮಹಿಳೆಗೆ ಅಸಭ್ಯ ಸಂದೇಶ ರವಾನಿಸಿ ಕಿರುಕುಳ, ಧಮ್ಕಿ - ಕಾವೂರು ಠಾಣಾ ಹೆಡ್ ಕಾನ್‌ಸ್ಟೇಬಲ್ ಅಮಾನತು


ಮಂಗಳೂರು: ಠಾಣೆಗೆ ದೂರು ನೀಡಲು ಬಂದ ಮಹಿಳೆಯ ಮೊಬೈಲ್ ಗೆ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಲ್ಲದೆ, ಆ ಬಳಿಕ ಧಮ್ಕಿ ನೀಡಿರುವ ಆರೋಪದಲ್ಲಿ ಕಾವೂರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಸಿ.ಜೆ. ಎಂಬಾತನನ್ನು ಮಂಗಳೂರು ಪೊಲೀಸ್ ಕಮಿಷನರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ನೀಡಲು ಕಾವೂರು ಠಾಣೆಗೆ ಬಂದಿದ್ದರು. ಈ ವೇಳೆ ಅಲ್ಲಿನ ಹೆಡ್ ಕಾನ್‌ಸ್ಟೇಬಲ್‌ ಸಂತೋಷ್‌ ಆಕೆಯ ಮೊಬೈಲ್ ನಂಬ‌ರ್ ಪಡೆದಿದ್ದ. ಆ ಬಳಿಕದಿಂದ ಆಕೆಗೆ ಅಸಭ್ಯವಾದ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ 'ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಜೀವನ ಪರ್ಯಂತ ನಿನ್ನನ್ನು ಕೊರಗುವಂತೆ ಮಾಡುತ್ತೇನೆ. ಜೊತೆಗೆ ನಿನ್ನ ಇಡೀ ಕುಟುಂಬವನ್ನು ಮುಗಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. 

ಸಂತೋಷ್ ಕಿರುಕುಳ, ಬೆದರಿಕೆಯಿಂದ ಬೇಸತ್ತ ಮಹಿಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಆತ ಬೆದರಿಕೆ ಒಡಿರುವ ಆಡಿಯೋ ಸಂದೇಶವನ್ನು ಕಮಿಷನರ್ ಅವರಿಗೆ ನೀಡಿದ್ದಾರೆಂದು ತಿಳಿದು ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನ‌ರ್ ಅವರು, ಹೆಡ್ ಕಾನ್‌ಸ್ಟೇಬಲ್ ಸಂತೋಷ್‌ ಸಿ.ಜೆ.ಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿಗೆ ಸೂಚಿಸಿದ್ದಾರೆ.