ಹೆತ್ತವರ ವಿರೋಧದಿಂದ ವಿವಾಹವಾಗುವ ಭರವಸೆ ಈಡೇರಿಸದಿದ್ದಲ್ಲಿ ಅತ್ಯಾಚಾರವಲ್ಲ - ಮುಂಬೈ ಹೈಕೋರ್ಟ್
Sunday, February 4, 2024
ನಾಗ್ಪುರ: ಹೆತ್ತವರ ವಿರೋಧದಿಂದ ವ್ಯಕ್ತಿಯೋರ್ವನು ವಿವಾಹವಾಗುವ ಭರವಸೆಯಿಂದ ಹಿಂದೆ ಸರಿದಲ್ಲಿ ಈ ಸಂಬಂಧ ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ಮುಂಬೈ ಹೈಕೋರ್ಟ್ ನಾಗ್ಪುರ ಪೀಠ ತೀರ್ಪು ನೀಡಿದೆ. ವಿವಾಹದ ಆಮಿಷವೊಡ್ಡಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪ ಹೊರಿಸಿ ಯುವತಿಯೊಬ್ಬಳು ದಾಖಲಿಸಿರುವ ದೂರಿನ ವಿಚಾರಣೆ ನಡೆಸಿ 31 ವರ್ಷದ ಯುವಕನನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಈ ಸಂಬಂಧದ ಆರಂಭದಿಂದಲೂ ಸಂತ್ರಸ್ತೆಯನ್ನು ವಿವಾಹವಾಗುವ ಉದ್ದೇಶ ಆ ಯುವಕನಿಗೆ ಇರಲಿಲ್ಲ. ಅಲ್ಲದೆ ತನ್ನ ದೈಹಿಕ ಕಾಮನೆಯನ್ನು ಪೂರೈಸಲು ಆತ ಸುಳ್ಳು ಭರವಸೆ ನೀಡಿದ್ದ ಎಂದು ಸಾಬೀತುಪಡಿಸುವ ಯಾವ ದಾಖಲೆಗಳೂ ಇಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿದಾರರು ವಿವಾಹವಾಗಲು ಸಿದ್ಧರಿದ್ದರು ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿತ್ತು.
ಆದರೆ ತನ್ನ ಹೆತ್ತವರು ಒಪ್ಪಿಗೆ ನೀಡದ ಏಕೈಕ ಕಾರಣದಿಂದ ಆತ ವಿವಾಹ ಪ್ರಸ್ತಾವನೆಯಿಂದ ಹಿಂದೆ ಸರಿದಿದ್ದಾರೆ. ಇದು ಭಾರತೀಯ ದಂಡಸಂಹಿತೆಯ ಸೆಕ್ಷನ್ 375 (ಮಹಿಳೆಯ ಒಪ್ಪಿಗೆ ಇಲ್ಲದೇ ಆಕೆಯ ಜತೆ ಸಂಭೋಗ ನಡೆಸುವ ಅಪರಾಧ) ವ್ಯಾಪ್ತಿಗೆ ಬರುವ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಮಹೇಂದ್ರ ಚಂದ್ವಾನಿ ಅಭಿಪ್ರಾಯಪಟ್ಟಿದ್ದಾರೆ.