ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ ಅತ್ಯಾಚಾರ ಪ್ರಕರಣದಲ್ಲಿ ಕಾರಾಗೃಹ ಶಿಕ್ಷೆ - ದೇಶೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು


ಹೊಸದಿಲ್ಲಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನೇಪಾಳದ ಸ್ಪಿನ್ನರ್ ಸಂದೀಪ್ ಲಮಿಚಾನೆಗೆ ನೇಪಾಳದ ಕಂಡು ಜಿಲ್ಲಾ ನ್ಯಾಯಾಲಯವು 8 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ನೇಪಾಳ ಕ್ರಿಕೆಟ್ ಸಂಸ್ಥೆಯು(ಸಿಎಎನ್) ಅಮಾನತುಗೊಳಿಸಿದೆ.

ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿರುವ ಸಿಎಎನ್‌, ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ, ಶಿಕ್ಷೆಗೊಳಗಾಗಿರುವ ಸಂದೀಪ್ ಲಮಿಚಾನೆಯನ್ನು ಎಲ್ಲಾ ರೀತಿಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತುಗೊಳಿಸಲಾಗಿದೆ. ಕಂಡು ಜಿಲ್ಲಾ ನ್ಯಾಯಾಲಯ ಕ್ರಿಕೆಟಿಗ ಸಂದೀಪ್ ಗೆ 8 ವರ್ಷಗಳ ಜೈಲು ಶಿಕ್ಷೆಗೊಳಪಡಿಸಿದ್ದಲ್ಲದೆ, 3 ಲಕ್ಷ ರೂ. ದಂಡವನ್ನು ವಿಧಿಸಿದೆ. ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 2 ಲಕ್ಷ ರೂ. ಪರಿಹಾರವನ್ನು ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಆದರೆ ಕ್ರಿಕೆಟಿಗ ಸಂದೀಪ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಉದ್ದೇಶಿಸಿದ್ದಾರೆ ಎಂದು ಸಂದೀಪ್ ಪರ ವಕೀಲ ಸರೋಜ್ ಹೇಳಿದ್ದಾರೆ.

ಸೀಮಿತ ಓವರ್‌ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದ ಸಂದೀಪ್ ನೇಪಾಳದ ಪರ 103 ಪಂದ್ಯಗಳಲ್ಲಿ 100 ವಿಕೆಟ್ ಗಳನ್ನು ಉರುಳಿಸಿದ್ದರು. 2018ರಿಂದ 2020ರ ತನಕ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸಿದ್ದು ಸಂದೀಪ್ 9 ಪಂದ್ಯಗಳಲ್ಲಿ ಒಟ್ಟು 13 ವಿಕೆಟ್ ಗಳನ್ನು ಪಡೆದಿದ್ದರು.