ಸಂಚಾರದಲ್ಲಿದ್ದ ರೈಲಿನಲ್ಲಿಯೇ ಪ್ರಯಾಣಿಕರ ನಡುವೆ ಯುವತಿಗೆ ತಾಳಿ ಕಟ್ಟಿದ ಯುವಕ : ವೀಡಿಯೋ ವೈರಲ್
ನವದೆಹಲಿ: ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರವಿಚಿತ್ರವೆನಿಸುವ ದಿನನಿತ್ಯವೂ ಸಾವಿರಾರು ವೀಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವೀಡಿಯೋಗಳು ವಿಚಿತ್ರ ಕಾರಣಗಳಿಂದ ಎರ್ರಾಬಿರ್ರಿ ವೈರಲ್ ಆಗಿಬಿಡುತ್ತವೆ. ಇದೀಗ ಅಂಥದ್ದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಚಲಿಸುವ ರೈಲಿನಲ್ಲಿಯೇ ಯುವಜೋಡಿಯೊಂದು ವಿವಾಹವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕರು ರೈಲಿನಲ್ಲಿ ಇದ್ದಾಗಲೇ ಯುವಕನೊಬ್ಬ ಎಲ್ಲರ ಸಮ್ಮುಖದಲ್ಲಿ ಯುವತಿಗೆ ತಾಳಿ ಕಟ್ಟುತ್ತಿರುವ ಮತ್ತು ಹಾರ ಬದಲಾಯಿಸುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಪರಸ್ಪರ ಇಬ್ಬರು ತಬ್ಬಿಕೊಳ್ಳುತ್ತಿರುವುದು ಹಾಗೂ ಯುವತಿಯನ್ನು ಯುವಕ ಸಂತೈಸುತ್ತಿರುವುದು ಮತ್ತು ಪ್ರಯಾಣಿಕರು ನವಜೋಡಿಗೆ ಶುಭ ಹಾರೈಸುತ್ತಿರುವ ಭಾವುಕ ಕ್ಷಣಗಳಿಗೆ ರೈಲು ಸಾಕ್ಷಿಯಾಗಿದೆ.
ವರದಿಗಳ ಪ್ರಕಾರ ಅಸನ್ಸೋಲ್-ಜಸಿದಿಹ್ ರೈಲಿನಲ್ಲಿ ಈ ವಿಚಿತ್ರ ವಿವಾಹ ನೆರವೇರಿದೆ. ಸಹ ಪ್ರಯಾಣಿಕರ ಹರ್ಷೋದ್ಘಾರದ ನಡುವೆಯೇ ಯುವಕ, ಯುವತಿಗೆ ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮದುವೆಯ ದೃಶ್ಯವನ್ನು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ನವೆಂಬರ್ 25ರಂದು max_sudama_1999 ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಈವರೆಗೂ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 73 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.