ರಾಗಿಮುದ್ದೆಯಲ್ಲಿ ಸೈನೈಡ್ ಬೆರೆಸಿ ಪತ್ನಿಯ ಹತ್ಯೆ - ತಪ್ಪೊಪ್ಪಿಕೊಂಡ ಪತಿ
Thursday, December 14, 2023
ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲೂಕಿನ ದೇವರುಂದ ಗ್ರಾಮದಲ್ಲಿ ಸೋಮವಾರ ರಾತ್ರಿ ವಿವಾಹಿತೆಯೋರ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆ ಶ್ವೇತಾ ಪತಿ ದರ್ಶನ್ ರಾಗಿಮುದ್ದೆಯಲ್ಲಿ ಸೈನೆಡ್ ಬೆರೆಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಶ್ವೇತಾ ಹಾಗೂ ದರ್ಶನ್ ನಾಲ್ಕು ದಿನಗಳ ಹಿಂದೆ ಮೂಡಿಗೆರೆ ತಾಲೂಕು ದೇವರುಂದ ಗ್ರಾಮದ ಮನೆಗೆ ಬಂದಿದ್ದರು. ಆದರೆ ಮನೆಯಲ್ಲಿ ಶ್ವೇತಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅಲ್ಲದೆ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಶ್ವೇತಾ ಕುಟುಂಬಸ್ಥರು ಇದು ಸಹಜ ಸಾವಲ್ಲ, ಇದೊಂದು ಕೊಲೆ ಎಂದು ಆರೋಪಿಸಿ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಗೋಣಿಬೀಡು ಪೊಲೀಸ್ ಠಾಣೆ ಪೊಲೀಸರು ದರ್ಶನ್‌ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ತಾನೇ ರಾಗಿಮುದ್ದೆಯಲ್ಲಿ ಸೈನೆಡ್ ಬೆರೆಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದರ್ಶನ್ ಲ್ಯಾಬ್ ಟೆಕ್ನಿಷಿಯನ್ ಆಗಿದ್ದು, ಲ್ಯಾಬ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೆಂಗಳೂರಿನ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ಅಕ್ರಮ ಸಂಬಂಧಕ್ಕೆ ಶ್ವೇತಾ ಅಡ್ಡಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾತ್ರಿ ಊಟದ ರಾಗಿಮುದ್ದೆಯಲ್ಲಿ ಸೈನೆಡ್ ಬೆರೆಸಿದ ದರ್ಶನ್ ಪತ್ನಿ ಶ್ವೇತಾಗೆ ನೀಡಿದ್ದಾನೆ. ಮುದ್ದೆ ಸೇವಿಸಿದ ಶ್ವೇತಾ ಸಾವನ್ನಪ್ಪಿದ ಮೇಲೆ ಸಿರೆಂಜ್‌ನಿಂದ ಇಂಜಕ್ಷನ್ ನೀಡಿದ್ದಾನೆ. ಬಳಿಕ ಇಂಜೆಕ್ಷನ್ ತಗೆದುಕೊಂಡು ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದಾನೆ. ತಾನು ಮಾಡಿಕೊಂಡಿದ್ದ ಪ್ಲಾನ್ ಉಲ್ಟಾ ಆಗುತ್ತದೆ ಎಂದು ತಿಳಿದ ದರ್ಶನ್, ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಪ್ರಕರಣದ ಹಾದಿತಪ್ಪಿಸಲು ತರಾತುರಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಎನ್ನಲಾಗಿದೆ.
ಪುತ್ರಿಯ ಸಾವಿನ ಸುದ್ದಿ ತಿಳಿದ ಕಳಸ ಮೂಲದ ಪೋಷಕರು, ಸಂಬಂಧಿಕರು ದೇವರುಂದ ಗ್ರಾಮಕ್ಕೆ ಆಗಮಿಸಿ ಶವಸಂಸ್ಕಾರವನ್ನು ತಡೆದಿದ್ದಾರೆ. ಇದು ಸಹಜ ಸಾವಲ್ಲ, ದರ್ಶನ್ ವಿಷದ ಇಂಜಕ್ಷನ್ ನೀಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಗಿತ್ತು. ಬಳಿಕ ಗೋಣಿಬೀಡು ಪೊಲೀಸರು ದರ್ಶನ್ ಹಾಗೂ ಆತನ ಅಣ್ಣನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ರಾತ್ರಿ ಊಟದ ರಾಗಿಮುದ್ದೆಯಲ್ಲಿ ಸೈನೆಡ್ ಬೆರೆಸಿ ತಾನೇ ಶ್ವೇತಳನ್ನು ಕೊಲೆ ಮಾಡಿರುವುದಾಗಿ ಶ್ವೇತಾ ಪತಿ ದರ್ಶನ್ ಒಪ್ಪಿಕೊಂಡಿದ್ದಾನೆಂದು ಹೇಳಲಾಗುತ್ತಿದೆ.