Alvas Virasat 2023: ಮೂಡುಬಿದಿರೆ: ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಹಸ ನೃತ್ಯ ವೈಭವ
Sunday, December 17, 2023
ಮೂಡುಬಿದಿರೆ: ಇಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ 29ನೇ ಆಳ್ವಾಸ್ ವಿರಾಸತ್‍ನ ಮೂರನೇ ದಿನ ಶನಿವಾರದಂದು ಆಳ್ವಾಸ್ ವಿದ್ಯಾರ್ಥಿಗಳಿಂದ ನಡೆದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಗುಜರಾತ್ ದಾಂಡಿಯಾ ರಾಸ್ ಸಾಂಪ್ರದಾಯಿಕ ಜಾನಪದ ನೃತ್ಯರೂಪ ಎಲ್ಲರ ಗಮನ ಸೆಳೆಯಿತು. ಕೃಷ್ಣನಿಂದ ವೃಂದಾವನದಲ್ಲಿ ಹುಟ್ಟಿಕೊಂಡಿದೆ ಎನ್ನಲಾದ ದಾಂಡಿಯಾ ರಾಸ್ ಅನ್ನು ಹೋಳಿ ಮತ್ತು ಕೃಷ್ಣ ಹಾಗೂ ರಾಧೆಯರ ಲೀಲೆಯನ್ನು ಚಿತ್ರಿಸಿ ನರ್ತಿಸಲಾಗುತ್ತದೆ.
‘ಗರ್ಬಾ’ದೊಂದಿಗೆ ಇದು ಪಶ್ಚಿಮ ಭಾರತದಲ್ಲಿ ನವರಾತ್ರಿ ಸಂಜೆ ವೇಳೆ ವೈಶಿಷ್ಟ್ಯಪೂರ್ಣ ನೃತ್ಯವನ್ನು ನರ್ತಿಸಲಾಗುತ್ತದೆ. ಆಳ್ವಾಸ್ ವಿದ್ಯಾರ್ಥಿಗಳು ಗುಜರಾತಿ ಸಾಂಪ್ರದಾಯಿಕ ಧಿರಿಸು ಧರಿಸಿ, ಕೋಲಾಟದ ಮೂಲಕ ಕೃಷ್ಣನ ಗುಣಗಾನದ ಹಾಡಿಗೆ ನರ್ತಿಸಿದರು.
ಗುಜರಾತ್ ಪ್ರದೇಶದ ಜಾನಪದ ತಾಳ, ಕೋಲಾಟ, ಭತ್ರಿ, ಬಿಂದಿಗೆಯ ವೈಭವ ರಂಗೇರಿತು. ಬಳಿಕ ಮಂಗಳೂರಿನ ವಿದುಷಿ ಶಾರದಾ ಮಣಿಶೇಖರ್ ಆವರ ಸನಾತನ ನಾಟ್ಯಾಲಯದ ವಿದುಷಿ ಲತಾ ನಾಗರಾಜ್ ಶಿಷ್ಯೆಯಂದಿರು “ತೊಡಯಂ ಮಂಗಳಂ” ಪ್ರಸ್ತುತ ಪಡಿಸಿದರು. ಸರಸ್ವತಿ, ಲಕ್ಷ್ಮೀ ಸ್ತುತಿಯ ಭಾವಾಭಂಗಿಗಳು, ಆಕರ್ಷಕವಾಗಿ ಮೂಡಿಬಂತು. ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ಇದು ಪ್ರಚಲಿತ. ಇಂತಹ ಅಪೂರ್ವ ನೃತ್ಯ ಪ್ರಕಾರವನ್ನು 2013 ರಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ 10 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದು, 10 ವರ್ಷದಲ್ಲೇ ಈ ವೇದಿಕೆಯಲ್ಲಿ 130 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ವಿಶಿಷ್ಟವಾದ ನೃತ್ಯ ಶೈಲಿಯಾದ ಡೊಳ್ಳು ಕುಣಿತ ಕರ್ನಾಟಕದ ಜನಪದ ಕಲಾ ಪ್ರಕಾರ. ಮೂಲತಃ ಕುರುಬ ಸಮುದಾಯದ ಈ ಕುಣಿತ ಕರಿ ಕಂಬಳಿ ಹೊದ್ದುಕೊಂಡು ಬೀರೇಶ್ವರ ದೇವರನ್ನು ಆರಾಧಿಸುವ ನರ್ತನ. ಆಳ್ವಾಸ್ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಡೊಳ್ಳು ಕುಣಿತ ಕುಣಿದರು. ಒಬ್ಬರ ಮೇಲೊಬ್ಬರು ಏರುವ ಮೂಲಕ ಪ್ರೇಕ್ಷಕರಿಗೆ ಸ್ಫೂರ್ತಿ ನೀಡಿದರು. ಗಂಡು ಕಲೆ ಎನಿಸಿಕೊಂಡಿದ್ದ ಡೊಳ್ಳಿನಲ್ಲಿ ಯುವತಿಯರೂ ಪಾಲ್ಗೊಂಡರು. ಪುರುಷ - ಸ್ತ್ರೀಯರ ಜುಗಲ್ ಬಂದಿ ಯುವ ಮನಸ್ಸುಗಳಿಗೆ ರೋಮಾಂಚನ ಮೂಡಿಸಿತು. ಚಕ್ರದ ಮೇಲೆ ಏಣಿ ಇರಿಸಿ ಅದನ್ನು ಏರಿ ಕನ್ನಡ ಬಾವುಟ ಹಾರಾಡಿಸಿದಾಗ ವಿದ್ಯಾರ್ಥಿಗಳ ಕನ್ನಡಾಭಿಮಾನ ಮೂಡಿಬಂತು.
ಫಿಲಿಪೈನ್ಸ್, ಚೀನಾ, ಹವಾಯಿ, ತೈವಾನ್ ಮತ್ತು ವಿಯೆಟ್ನಾಂ ದೇಶಗಳ ಸಂಸ್ಕೃತಿಗೆ ಸೇರಿದ ಬಿದಿರಿನ ಕಡ್ಡಿ ನೃತ್ಯವು ಉತ್ತಮವಾಗಿ ಪ್ರಸ್ತುತಿಗೊಂಡಿತು. ಏಕಾಗ್ರತೆ ಸಮತೋಲನದ ನೃತ್ಯ ಈಶಾನ್ಯ ಭಾರತದ ಮಣಿಪುರದ ಸ್ಟಿಕ್ ಡ್ಯಾನ್ಸ್ ಕೂಡಾ ಆಳ್ವಾಸ್ ವೇದಿಕೆಯಲ್ಲಿ ಪ್ರಸ್ತುತ ವಾಯಿತು. ಈಶಾನ್ಯ ಬೆಟ್ಟದ ನಿನಾದಕ್ಕೆ ಸಮತೋಲನದಿಂದ ಮಾಡುವ ನೃತ್ಯ ಮೂಲತಃ ಏಕ ವ್ಯಕ್ತಿ ನೃತ್ಯ. ಆದರೆ ಸಮೂಹ ನೃತ್ಯವಾಗಿ ಡಾ. ಎಂ ಮೋಹನ ಆಳ್ವ ಅವರು ರೂಪುಗೊಳಿಸಿದ್ದಾರೆ. ಸಾಹಸ ಪ್ರಯೋಗಗಳ ಮೂಲಕ ವೇದಿಕೆಯಲ್ಲಿ ಪ್ರಸ್ತುತಗೊಂಡಿತು.
ಮಣಿಪುರ ವಿದ್ಯಾರ್ಥಿಗಳ ಸಾಹಸ- ಏಕಾಗ್ರತೆಗೆ ಪ್ರೇಕ್ಷಕರು ತಲೆದೂಗಿದರು. ಮೈ ನವಿರೇಳಿಸುವ ಪ್ರದರ್ಶನ ಪುಳಕಗೊಳಿಸಿತು. ಆಳ್ವಾಸ್ ಜೊತೆಗಿನ ಮಣಿಪುರ ನಂಟು ಜನರಿಗೂ ಬಾಂಧವ್ಯ ಮೂಡಿಸಿತು. ಸಾಹಸ ನೃತ್ಯದ ಬೆನ್ನಲ್ಲೇ ಜನರನ್ನು ಮಂತ್ರ ಮುಗ್ಧಗೊಳಿಸಿದ್ದು, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ. ತುಳುನಾಡಿನ ದೈವಾರಾಧನೆ ನೆನಪಿಸುವ ವೇಷಭೂಷಣ, ತೂಟೆ ಬೆಂಕಿ, ತಿರುಗುವ ಚಕ್ರ, ಹೆಜ್ಜೆಗಳು ಆಕರ್ಷಕ ವಾಗಿ ಮೂಡಿ ಬಂದವು.
ಶ್ರೀಲಂಕಾದ ಧಾರ್ಮಿಕ ನೃತ್ಯಗಳು ತಮ್ಮ ವಿಭಿನ್ನ ಅತೀಂದ್ರಿಯ ಸೌಂದರ್ಯಕ್ಕಾಗಿ ವಿಶ್ವ ಖ್ಯಾತಿಯನ್ನು ಗಳಿಸಿವೆ. ಭಾರತದಿಂದ ಹೆಚ್ಚು ಪ್ರಭಾವಿತವಾಗಿರುವ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಮತ್ತು ಕೋಲಂ ನಾಟಕಗಳು ದಕ್ಷಿಣ ಭಾರತದ ಮೂಲವನ್ನು ಹೊಂದಿವೆ. ಬಳಿಕ ಖುಷಿ ನೀಡಿದ್ದು ರೋಪ್ ಜಂಪ್. ಸರ್ಕಸ್ ಗಳಲ್ಲಿ ಪ್ರಯೋಗಿಸುತ್ತಿದ್ದ ಸಾಹಸ ಹಾಗೂ ಕ್ರೀಡೆಗೆ ಡಾ.ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯಂತೆ ಕಲಾ ರೂಪ ನೀಡಿದ ನೃತ್ಯ. ಜಂಪ್, ರಿಂಗ್, ರೋಪ್, ಸ್ಟಿಕ್, ಚೆಂಡು ಪ್ರದರ್ಶನ. ಸರ್ಕಸ್ ಸಾಹಸವನ್ನು ನೆನಪಿಸಿತು.