ಬೆಂಗಳೂರು ಕಂಬಳ ನೋಡಿ ವಾಪಸ್ ಆಗುತ್ತಿದ್ದವರ ಕಾರಿಗೆ ಲಾರಿ ಡಿಕ್ಕಿ : ಇಬ್ಬರು ಮೃತ್ಯು, ಮೂವರಿಗೆ ಗಂಭೀರ ಗಾಯ


ತುಮಕೂರು: ಬೆಂಗಳೂರು ಕಂಬಳ ನೋಡಿ ಹಿಂದೆ ಬರುತ್ತಿದ್ದವರ ಕಾರಿಗೆ​ ಲಾರಿ ಢಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಚಿಗಣಿಪಾಳ್ಯ ಬಳಿ ನಡೆದಿದೆ. 

ಮಂಗಳೂರಿನ ಬಜಪ್ಪೆ ಗ್ರಾಮದ ಪೆರಾರ ನಿವಾಸಿ ಕಿಶನ್ ಶೆಟ್ಟಿ (20) ಹಾಗೂ ಭಟ್ಟರ ತೋಟದ ನಿವಾಸಿ ಫೀಲಿಪ್ ನೇರಿ (32) ಮೃತಪಟ್ಟ ದುರ್ದೈವಿಗಳು.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿರುವ ಕಂಬಳವನ್ನು ನೋಡಿಕೊಂಡು ಊರಿಗೆ ವಾಪಸ್​ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ‌ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವವರನ್ನು ಆದಿಚುಂಚನಗಿರಿಯ ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಗಾಯಾಳುಗಳ ಮೇಲೆ ನಿಗಾ ವಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುಣಿಗಲ್​ ಠಾಣೆ ಪೊಲೀಸರು ಲಾರಿ ಹಾಗೂ ಅದರ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಣಿಗಲ್ ‌ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.