ವಿಜಯಪುರ: ಕ್ರಿಪ್ಟೋ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದ್ದಲ್ಲಿ 200 ಪ್ರತಿಶತ ಲಾಭಾಂಶ ನೀಡುವುದಾಗಿ ಉದ್ಯಮಿಯೊಬ್ಬರನ್ನು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಂಗಳೂರಿನಲ್ಲಿಯೇ ವಶಕ್ಕೆ ಪಡೆಯಲಾಗಿದೆ.
ಉದ್ಯಮಿ ವಿಶಾಲ್ ಕುಮಾರ ಜೈನ್ ಎಂಬುವರನ್ನು ವಂಚಿಸಿ 59,12,765 ರೂಪಾಯಿ ಪಡೆದಿದ್ದ ಪ್ರಕರಣದಡಿ ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಇದೀಗ ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ನೈಜೇರಿಯಾದ ಒಸಮುದಿಯಾಮೆನ್ ಊರ್ಫ್ ಪೀಟರ್ ಇದೇಮುಸಿಯನ್ (38), ಎಮೆಕಾ ಊರ್ಫ್ ಹ್ಯಾಪಿ ಸ್ವಾವೊಲಿಸಾ (40) ಹಾಗೂ ಒಬಿನ್ನಾ ಸ್ಟಾನಿ ಇಹೆಕ್ಟೇರೆನ್ (42) ಬಂಧಿತ ಆರೋಪಿಗಳು.
ಬಂಧಿತರಿಂದ ವಿವಿಧ ಕಂಪೆನಿಯ 21 ಮೊಬೈಲ್ ಫೋನ್‌ಗಳು, 18 ಸಿಮ್ ಕಾರ್ಡ್, 1 ಲ್ಯಾಪ್ ಟಾಪ್, 2 ಪೆನ್ ಡ್ರೈವ್, 1 ಡೊಂಗಲ್, 2 ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವನೆ ತಿಳಿಸಿದ್ದಾರೆ.