ಇಂಡಿಯಾ ವಿಶ್ವಕಪ್ ಗೆದ್ದಲ್ಲಿ 100ಕೋಟಿ ರೂ. ಹಂಚುವೆ: ಆಸ್ಟ್ರೋಟಾಕ್​ ಸಿಇಒ ಘೋಷಣೆ


ನವದೆಹಲಿ: ಗುಜರಾತಿನ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ವಿಶ್ವಕಪ್ ಕ್ರಿಕೆಟ್ ನ ಫೈನಲ್​ ಪಂದ್ಯಾಟ ನಡೆಯಲಿದೆ. ಈ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತದ ಪಾಲಿಗೆ ನಾಳೆ ಐತಿಹಾಸಿಕ ದಿನವಾಗಲಿದೆ. ಜೊತೆಗೆ ನಾಯಕ ರೋಹಿತ್​ ಶರ್ಮ ಜೀವನದಲ್ಲಿ ಎಂದೂ ಮರೆಯದ ಕ್ಷಣವಾಗಲಿದೆ. ವಿಶ್ವಕಪ್​ನಲ್ಲಿ ಒಂದೂ ಪಂದ್ಯವನ್ನೂ ಸೋಲದೆ ಫೈನಲ್​ ಹಂತವನ್ನು ತಲುಪಿರುವ ಭಾರತ ಇತಿಹಾಸ ನಿರ್ಮಾಣದ ಕಾತರದಲ್ಲಿದೆ.

ಈ ನಡುವೆ ಆಸ್ಟ್ರೋಟಾಕ್​ ಕಂಪೆನಿಯ ಸಿಇಒ ಪುನೀತ್​ ಗುಪ್ತ ತಮ್ಮ ಬಳಕೆದಾರರಿಗೆ ಬಂಪರ್​ ಘೋಷಿಸಿದ್ದಾರೆ. ಒಂದು ವೇಳೆ ಭಾರತ ವಿಶ್ವಕಪ್​ ಟ್ರೋಫಿ ಜಯಿಸಿದ್ದಲ್ಲಿ ತಮ್ಮ ಬಳಕೆದಾರರಿಗೆ 100 ಕೋಟಿ ರೂಪಾಯಿ ಹಂಚುವುದಾಗಿ ಪುನೀತ್​ ಗುಪ್ತ ಭರವಸೆ ನೀಡಿದ್ದಾರೆ.

ಇದೇ ಸಂದರ್ಭ 2011ರ ವಿಶ್ವಕಪ್​ ಟೂರ್ನಿ ಬಗ್ಗೆ ತಮ್ಮ ಲಿಂಕ್​ಡಿನ್​ ಖಾತೆಯಲ್ಲಿ ಬರೆದುಕೊಂಡಿರುವ ಗುಪ್ತ, 2011ರಲ್ಲಿ ಭಾರತ ವಿಶ್ವಕಪ್​ ಗೆದ್ದಂತಹ ಸಂದರ್ಭ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ಅದು ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಪಂದ್ಯದ ಉತ್ಸಾಹ ಹಾಗೂ ಒತ್ತಡದ ವಾತಾವರಣದ ಬಗ್ಗೆ ಮಾತನಾಡಿರುವ ಗುಪ್ತ, ಪಂದ್ಯದ ಹಿಂದಿನ ದಿನ ನಾವು ರಾತ್ರಿಯಿಡಿ ಮಲಗುತ್ತಿರಲಿಲ್ಲ. ಇಡೀ ದಿನ ಪಂದ್ಯದ ಲೆಕ್ಕಾಚಾರಗಳ ಬಗ್ಗೆ ಚರ್ಚಿಸುತ್ತಿದ್ದೆವು ಎಂದಿದ್ದಾರೆ.

2011ರಲ್ಲಿ ನಾವು ಪಂದ್ಯವನ್ನು ಗೆದ್ದಾಗ, ನಾನು ದೀರ್ಘಾವಧಿಯವರೆಗೆ ಮೈರೋಮಾಂಚನ ಹೊಂದಿದ್ದೆ. ನನ್ನೆಲ್ಲಾ ಸ್ನೇಹಿತರನ್ನು ಅಪ್ಪಿಕೊಂಡಿದ್ದೆ. ಆ ದಿನೇ ಸ್ನೇಹಿತರು ಸೇರಿಕೊಂಡು ಚಂಡೀಗಢಕ್ಕೆ ಬೈಕ್ ರೈಡ್‌ಗೆ ಹೋಗಿದ್ದೆವು. ಅಲ್ಲದೆ ಪ್ರತೀ ವೃತ್ತದಲ್ಲೂ ಅಪರಿಚಿತರೊಂದಿಗೆ ಭಾಂಗ್ರಾ ನೃತ್ಯ ಮಾಡಿದೆವು. ನಾವು ಭೇಟಿಯಾದ ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುತ್ತಿದ್ದೆವು. ನಿಜವಾಗಿಯೂ ಇದು ನನ್ನ ಜೀವನದ ಸಂತೋಷದಾಯಕ ದಿನಗಳಲ್ಲಿ ಒಂದು ಎಂದು ಗುಪ್ತ ಹೇಳಿದರು.

ಕಳೆದ ವಿಶ್ವಕಪ್ ಗೆದ್ದಾಗ ಕೆಲವೇ ಕೆಲವು ಸ್ನೇಹಿತರೊಂದಿಗೆ ಮಾತ್ರ ಸಂತೋಷವನ್ನು ಹಂಚಿಕೊಂಡೆವು. ಆದರೆ, ಈ ಬಾರಿ ಸ್ನೇಹಿತರಂತೆ ಇರುವ ಸಾಕಷ್ಟು ಆಸ್ಟ್ರೋಟಾಕ್​ ಬಳಕೆದಾರರಿದ್ದಾರೆ. ಅವರಿಗೆ ನನ್ನ ಸಂತೋಷವನ್ನು ಅವರೊಂದಿಗೆ ಹಂಚಿಕೊಳ್ಳಲು ನಾನು ಏನಾದರೂ ಮಾಡಬೇಕಿದೆ ಎಂದರು.

ಈ ಬಗ್ಗೆ ನನ್ನ ಕಂಪೆನಿಯ ಹಣಕಾಸು ತಂಡದೊಂದಿಗೆ ನಾನು ಮಾತನಾಡಿದ್ದೇನೆ. ಆದ್ದರಿಂದ ಭಾರತ ಗೆಲುವು ಸಾಧಿಸಿದ್ದಲ್ಲಿ 100 ಕೋಟಿ ರೂಪಾಯಿಯನ್ನು ನಮ್ಮ ಬಳಕೆದಾರರ ವ್ಯಾಲೆಟ್​ಗೆ ಹಾಕುತ್ತೇನೆ ಎಂದು ಗುಪ್ತ ಭರವಸೆ ನೀಡಿದ್ದಾರೆ. ಅಲ್ಲದೆ, ಭಾರತ ಗೆಲ್ಲಲಿ ಎಂದು ಎಲ್ಲರೂ ಪ್ರಾರ್ಥಿಸಿ ಮತ್ತು ಹುರಿದುಂಬಿಸಿ ಎಂದು ಕರೆ ನೀಡಿದ್ದಾರೆ.