ಪ್ರೀತಿ ನಿರಾಕರಿಸಿದ್ದಕ್ಕೆ ಮಾರಕಾಯುಧದಿಂದ ಇರಿದು ಯುವತಿಯ ಕೊಲೆ


ಮುಂಬೈ: ಪ್ರೀತಿ ನಿರಾಕರಣೆ ಮಾಡಿದ್ದಾಳೆಂಬ ಕುಪಿತಗೊಂಡ ಯುವಕನೊಬ್ಬ ಹದಿನೆಂಟರ ಯುವತಿಯನ್ನು ಮಾರಕಾಯುಧದಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ ನಡೆದಿದೆ.

ಅರ್ಚನಾ ಲಕ್ಷ್ಮಣ್​ ಉದಾರ್ (18) ಮೃತಪಟ್ಟ ದುರ್ದೈವಿ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಯುವತಿಗೆ ತನ್ನನ್ನು ಪ್ರೀತಿಸುವಂತೆ ಬಹಳ ತಿಂಗಳುಗಳಿಂದ ದುಂಬಾಲು ಬಿದ್ದಿದ್ದ. ಆರೋಪಿ ತನ್ನ ಪೋಷಕರೊಂದಿಗೆ ಯುವತಿಯ ಮನೆಗೆ ತೆರಳಿ ಮದುವೆ ಮಾಡಿಕೊಡುವಂತೆ ಪ್ರಸ್ತಾಪಿಸಿದ್ದ. ಆದರೆ, ಯುವತಿಯ ಮನೆಯವರು ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

ಇದರಿಂದ ಕುಪಿತಗೊಂಡಿದ್ದ ಆರೋಪಿ ಆಕೆಯ ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಶುಕ್ರವಾರ ಮಧ್ಯಾಹ್ನ 12:30 ಸುಮಾರಿಗೆ ಯುವತಿ ತರಗತಿ ಮುಗಿಸಿಕೊಂಡು ಊಟಕ್ಕೆ ತೆರಳುವ ವೇಳೆ ಅಡ್ಡಗಟ್ಟಿದ್ದಾನೆ. ಬಳಿಕ ಆತ ಏಕಾಏಕಿ ಆಕೆಯ ಮೇಲೆ ಮಾರಕಾಯುಧದಿಂದ ದಾಳಿ ಮಾಡಲು ಶುರು ಮಾಡಿದ್ದಾನೆ. ಯುವತಿ ಸಹಾಯಕ್ಕೆಂದು ಕೂಗಿಕೊಂಡಾಗ ಭಯಗೊಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ತಕ್ಷಣ ಯುವತಿಯ ಅಲ್ಲಿದದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.