ಸೇಲ್ ಆಗದೆ ಉಳಿದ ಲಾಟರಿಗೆ ಹೊಡೆಯಿತು ಒಂದು ಕೋಟಿ ಬಹುಮಾನ - ಖುಲಾಯಿಸಿದ ಏಜೆಂಟ್ ಅದೃಷ್ಟ


ಕೊಚ್ಚಿ: ಅದೃಷ್ಟ ಯಾವಾಗ? ಹೇಗೆ? ಯಾವ ರೂಪದಲ್ಲಿ ಬರುತ್ತದೆಂದು ಹೇಳಲು ಅಸಾಧ್ಯ. ಸಾಮಾನ್ಯರಲ್ಲಿ ಸಾಮಾನ್ಯರಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿದ್ದೇವೆ. ಆಗ ಎಲ್ಲರೂ ನಮಗಾದರೂವೀ ಅದೃಷ್ಟ ಒಲಿದು ಬರಬಾರದಿತ್ತೆ ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆಯೊಂದು ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ.

ಲಾಟರಿ ಏಜೆಂಟ್‌ಗೆ ಟಿಕೆಟ್ ಮಾರಾಟಗೊಂಡರೆ ಮಾತ್ರ ಹಣ ಸಿಗುತ್ತದೆ. ಆದರೆ, ಮಾರಾಟವಾಗದೇ ಉಳಿದ ಟಿಕೆಟ್‌ಗೇ ಕೋಟಿ ರೂಪಾಯಿ ಬಹುಮಾನ ಬಂದರೆ ನಿಜಕ್ಕೂ ಅದು ಲಕ್ ಎಂದೇ ಹೇಳಬೇಕು. ಆ ಅದೃಷ್ಟಶಾಲಿಯೇ ಎನ್.ಕೆ. ಗಂಗಾಧರನ್.

ಗಂಗಾಧರನ್ ಸುಮಾರು 33 ವರ್ಷಗಳ ಕಾಲ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕೇವಲ 4 ವರ್ಷಗಳ ಹಿಂದಷ್ಟೇ ತನ್ನ ವೃತ್ತಿ ಜೀವನವನ್ನು ಬಸ್ ನಿರ್ವಾಹಕನಿಂದ ಲಾಟರಿ ಏಜೆಂಟ್ ಆಗಿ ಬದಲಾಯಿಸಿಕೊಂಡಿದ್ದಾರೆ. ವೇಲೂ‌ ಮೂಲದ ಗಂಗಾಧರನ್ ಕೋಯಿಕ್ಕೋಡ್‌ ಅಥೋಲಿಯಲ್ಲಿ ಲಾಟರಿ ಶಾಪ್ ನಡೆಸುತ್ತಿದ್ದರು.‌ ಮಾರಾಟವಾಗದೇ ಇವರಲ್ಲೇ ಉಳಿದ ಲಾಟರಿ ಟಿಕೆಟ್‌ಗೆ 1 ಕೋಟಿ ರೂಪಾಯಿ ಬಹುಮಾನ ಬಂದಿದೆ. ಸರ್ಕಾರದ ಫಿಫ್ಟಿ ಫಿಫ್ಟಿ ಲಾಟರಿ ವಿಭಾಗದಲ್ಲಿ ಗಂಗಾಧರ್ ಗೆ ಜಾಕ್‌ಪಾಟ್ ಹೊಡೆದಿದೆ.

ಗಂಗಾಧರ್ ಅವರ ಅಂಗಡಿಯಿಂದ ಲಾಟರಿ ಖರೀದಿಸಿದ್ದ ಆರು ಮಂದಿಗೆ ತಲಾ 5000 ಸಾವಿರ ರೂ. ಬಹುಮಾನ ಬಂದಿದೆ. ಗಂಗಾಧರ್ ಗೆ ಒಲಿದ ಅದೃಷ್ಟ ಅವರ ಲಾಟರಿ ಅಂಗಡಿಯ ಅದೃಷ್ಟವನ್ನೂ ಬದಲಾಯಿಸಿದೆ. ಇದೀಗ ಕೋಯಿಕ್ಕೋಡ್‌ನ ಅಥೋಲಿಯಲ್ಲಿ ಅವರ ಲಾಟರಿ ಅಂಗಡಿ ಬಹಳ ಸದ್ದು ಮಾಡುತ್ತಿದೆ.