ಮುಲ್ಕಿ: ಕೊಳ್ನಾಡುವಿನಲ್ಲಿ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಯುವಕ

ಮಂಗಳೂರು: ನಗರದ ಮುಲ್ಕಿಯ ಕೊಳ್ನಾಡುವಿನಲ್ಲಿ ಯುವಕನೊಬ್ಬ ಮೊಬೈಲ್ ಟವರ್ ಏರಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಬಿಜಾಪುರ ದ 32 ವರ್ಷದ ಸತೀಶ್ ಎಂಬಾತ ಮೊಬೈಲ್ ಟವರ್ ಏರಿದ ವ್ಯಕ್ತಿ. ಈತ ಇಂದು ಬೆಳಗ್ಗೆ ಕೊಳ್ನಾಡುವಿನಲ್ಲಿ ಮೊಬೈಲ್ ಟವರ್ ಏರಿದ್ದಾನೆ. ಬೆಳಗ್ಗೆ 10ಗಂಟೆ ಸುಮಾರಿಗೆ ಈತ ಮೊಬೈಲ್ ತುತ್ತತುದಿ ಏರಿ ಕುಳಿತು ಆತಂಕ ಸೃಷ್ಟಿಸಿದ್ದಾನೆ. ತಕ್ಷಣ ಸ್ಥಳೀಯರು ಮುಲ್ಕಿ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮುಲ್ಕಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ್ ಮೂಲಕ ಮೈಕ್ ನಲ್ಲಿ ಆತನಿಗೆ ಮನವೊಲಿಸಿ ಕೆಳಗೆ ಬರಲು ಹೇಳಿದ್ದಾರೆ. ಆದರೆ ಯಾರ ಮಾತು ಕೇಳದ ಸತೀಶ್ ಪುನಃ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದಾನೆ.






ಮೂಲತಃ ವಿಜಯಪುರ ಜಿಲ್ಲೆಯವನಾದ ಈತ ಬೆಳಗಾಂ ಸಹಿತ ನಾಲ್ಕು ಕಡೆಗಳಲ್ಲಿ ಇದೇ ರೀತಿ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ ಎಂದು ತಿಳಿದು ಬಂದಿದೆ. ಆತ ತನ್ನ ಊರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾನೆ. ಮೊಬೈಲ್ ಟವರ್ ಗೆ ಯಾವುದೇ ರಕ್ಷಣಾ ಬೇಲಿಗಳಿಲ್ಲದೆ ಇರುವುದು ಈ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 1.15ರ ವೇಳೆಗೆ ಈತ ಮೊಬೈಲ್ ಟವರ್ ನಿಂದ ಇಳಿದಿದ್ದಾನೆ. ಈ ವೇಳೆ  ಪೊಲೀಸರು , ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದರು. ಈತ ಯಾವುದೇ ಉದ್ದೇಶ ಹೊಂದಿರದೆ ಮಾನಸಿಕ ಅಸ್ವಸ್ಥತೆಯಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu