ಮಂಗಳೂರು: ದಕ್ಷಿಣ ಕನ್ನಡ ಮೀನು ಮಾರಾಟ ಫೆಡರೇಶನ್ ನ 88 ಲಕ್ಷ ರೂ. ಚೆಕ್ ಬೌನ್ಸ್ - ವ್ಯಕ್ತಿ ಅರೆಸ್ಟ್


ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಲಿ.ಗೆ ನೀಡಿರುವ ಮೂರು ಚೆಕ್‌ಗಳು ಬೌನ್ಸ್‌ ಆಗಿರುವ ಹಿನ್ನೆಲೆಯಲ್ಲಿ ಒಟ್ಟು 88 ಲಕ್ಷ ರೂ. ಪಾವತಿಸಲು ವಿಫಲನಾದ ಮಂಜುನಾಥ ಖಾರ್ವಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಲಿ. ಸಂಸ್ಥೆಯಿಂದ ಮಂಜುನಾಥ ಖಾರ್ವಿ ಮೀನು ಖರೀದಿಸಿದ್ದರು. ಅಲ್ಲದೆ ಫೆಡರೇಷನ್‌ಗೆ ಮೀನು ಮಾರಾಟವಾದ ಕಮಿಷನ್‌ ಕೂಡ ಬಾಕಿ ಇರಿಸಿದ್ದರು. ಈ ಮೊತ್ತಕ್ಕೆ ಮೂರು ಚೆಕ್‌ಗಳನ್ನು ಫೆಡರೇಷನ್‌ಗೆ ನೀಡಿದ್ದರು. ಆ ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಲಾಗಿದೆ. ಆದರೆ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿದೆ. ಇದಕ್ಕೆ ಸಂಬಂಧಿಸಿದ ನೋಟಿಸ್‌ ನೀಡಿದರೂ, ಆತ ಬಾಕಿ ಮೊತ್ತ ನೀಡಿರಲಿಲ್ಲ. ಈ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ಅದರ ಮೇಲೆ ಮೂರು ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಆರೋಪಿ 5 ಲ.ರೂ., 53 ಲ.ರೂ. ಮತ್ತು 30 ಲ.ರೂ. ಸೇರಿದಂತೆ ಒಟ್ಟು 88 ಲ.ರೂ. ಪಾವತಿಸಬೇಕು ಎಂದು ಈ ಹಿಂದೆ ತೀರ್ಪು ನೀಡಿತ್ತು. ಆದರೆ ನ್ಯಾಯಾಲಯದ ತೀರ್ಪಿನಂತೆ ಹಣ ಮರುಪಾವತಿಸಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಆತನನ್ನು ಉಪ್ಪುಂದದಲ್ಲಿ ಮನೆಯಲ್ಲಿದ್ದಾಗಲೇ ಬಂಧಿಸಿದ್ದಾರೆ. ಬಳಿಕ 5ನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸೆಪ್ಟೆಂಬರ್ 20 ರಂದು ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೂರುದಾರರ ಪರ ವೆರಿಟಾಸ್‌ ಲೆಗೀಸ್‌ ಅಸೋಸಿಯೇಷನ್‌ ಮಂಗಳೂರಿನ ವಕೀಲರಾದ ರಾಘವೇಂದ್ರ ರಾವ್‌, ಗೌರಿ ಶೆಣೈ ವಾದಿಸಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu