ಮುಂಬೈ: ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯದ ರಕ್ಷಾಬಂಧನ ಹಬ್ಬದ ಜಾಹೀರಾತಿನಲ್ಲಿನ ಉಡುಪಿನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಆಭರಣ ತಯಾರಿಕಾ ಸಂಸ್ಥೆ ‘ಜಿವಾ’ (GIVA) ಆ ಜಾಹೀರಾತನ್ನು ಹಿಂಪಡೆದಿದೆ.
ಸದರಿ ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ್ದ ಬ್ರಾಲೆಟ್ ಶೈಲಿಯ ಬ್ಲೌಸ್, ಕೇಪ್ ಹಾಗೂ ಸ್ಕರ್ಟ್ ಒಳಗೊಂಡ ಉಡುಪು ಸಾಂಪ್ರದಾಯಿಕ ಹಬ್ಬದ ಪ್ರಚಾರಕ್ಕೆ ಸೂಕ್ತವಲ್ಲ ಎಂದು ಹಲವು ನೆಟ್ಟಿಗರು ಟೀಕಿಸಿದ್ದರು.
ಕಂಗನಾ ರಣಾವತ್ ತೀವ್ರ ಆಕ್ಷೇಪ: ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ಈ ಜಾಹೀರಾತನ್ನು ಖಂಡಿಸಿದ್ದರು. "ಇವತ್ತಿನ ಕಾಲದಲ್ಲಿ ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ವೈವಿಧ್ಯಮಯ ಉಡುಪುಗಳ ಆಯ್ಕೆಗಳಿವೆ. ಇಷ್ಟೆಲ್ಲಾ ಆಯ್ಕೆಗಳಿರುವಾಗ ಒಡಹುಟ್ಟಿದ ಸಹೋದರನಿಗೆ ಬಿಕಿನಿ ಅಥವಾ ಒಳಉಡುಪುಗಳನ್ನು ಧರಿಸಿ ರಾಖಿ ಕಟ್ಟುವುದು ಏಕೆ?" ಎಂದು ಆಗಸ್ಟ್ 24ರಂದು ಪ್ರಶ್ನಿಸಿದ್ದರು.
ಕೃತಿ ಸನೋನ್ ನೀಡಿದ್ದ ಸ್ಪಷ್ಟನೆ: ಈ ಟೀಕೆಗಳ ಕುರಿತು ಆಗಸ್ಟ್ 25ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದ ಕೃತಿ ಸನೋನ್, "ಹಬ್ಬಗಳ ಮಹತ್ವ ಇರುವುದು ಧರಿಸುವ ಬಟ್ಟೆಯಲ್ಲಲ್ಲ, ನಮ್ಮಲ್ಲಿರುವ ಭಾವನೆಗಳು ಹಾಗೂ ಸಂಪ್ರದಾಯಗಳಿಗೆ ನಾವು ಕೊಡುವ ಅರ್ಥದಲ್ಲಿ. ರಕ್ಷಾಬಂಧನ ಎನ್ನುವುದು ರಕ್ಷಣೆಯ ಪವಿತ್ರ ಬಂಧ. ನನ್ನ ಸಹೋದರಿ ಮತ್ತು ನಾನು ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಎಥ್ನಿಕ್ ಫ್ಯಾಷನ್ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಆದರೆ ಇನ್ನೂ ಮಹಿಳೆಯು ಸಂಸ್ಕೃತಿಗೆ ಕೊಡುವ ಗೌರವವನ್ನು ಆಕೆಯ ಉಡುಪಿನಿಂದ ಅಳೆಯಲಾಗುತ್ತಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳು ಹೃದಯದಲ್ಲಿರುತ್ತವೆಯೇ ಹೊರತು ನೆಕ್‌ಲೈನ್‌ನಲ್ಲಲ್ಲ" ಎಂದು ಸಮರ್ಥಿಸಿಕೊಂಡಿದ್ದರು.
ಜಾಹೀರಾತು ಹಿಂಪಡೆದ ಸಂಸ್ಥೆ: ಈ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ‘ಜಿವಾ’ ಸಂಸ್ಥೆ, "ನಾವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳಿಗೆ ಅತ್ಯಂತ ಗೌರವ ನೀಡುತ್ತೇವೆ. ನಮ್ಮ ಇತ್ತೀಚಿನ ಜಾಹೀರಾತು ಸಮಾಜದ ಕೆಲವರ ಭಾವನೆಗಳಿಗೆ ಅರಿವಿಲ್ಲದೆ ಧಕ್ಕೆ ತಂದಿದ್ದರೆ, ಅದು ನಮ್ಮ ಉದ್ದೇಶವಾಗಿರಲಿಲ್ಲ. ಸಂಸ್ಕೃತಿಯ ಮೇಲಿನ ಗೌರವದಿಂದಾಗಿ ನಾವು ಈ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿದ್ದೇವೆ" ಎಂದು ತಿಳಿಸಿದೆ.
